ಕಡಪಾ: ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದ 55 ವರ್ಷದ ಆಂಧ್ರ ಪ್ರದೇಶದ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಒಬ್ಬರು ಬಳಿಕ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ನಡೆದಿರುವ ಘಟನೆಯು ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮನೆಯಿಂದ ಸೂಸೈಡ್ ನೋಟ್ ವಶಕ್ಕೆ ಪಡೆಯಲಾಗಿದೆ.
ಕಡಪಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ವರಲು, ಬುಧವಾರ ರಾತ್ರಿ 11 ಗಂಟೆಯವರೆಗೂ ಕೆಲಸ ಮಾಡಿ ಠಾಣೆಯಿಂದ ಪಿಸ್ತೂಲ್ ಮತ್ತು ಕೆಲವು ಗುಂಡಿನ ಸುತ್ತುಗಳನ್ನು ತೆಗೆದುಕೊಂಡು ಮನೆಗೆ ಹೋಗಿದ್ದರು ಎಂದು ಕಡಪ ಉಪ- ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಡಿ. ಶರೀಫ್ ತಿಳಿಸಿದ್ದಾರೆ.
ವೆಂಕಟೇಶ್ವರಲು ಅವರ ಹಿರಿಯ ಮಗಳು, ಸುಮಾರು 20 ವರ್ಷ ವಯಸ್ಸಿನವರಾಗಿದ್ದು, ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಿರಿಯವಳು 10ನೇ ತರಗತಿಯಲ್ಲಿ ಓದುತ್ತಿದ್ದರು. ವೆಂಕಟೇಶ್ವರಲು ಅವರ ಪತ್ನಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು ಎಂದು ವಿವರಿಸಿದರು. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹಣವನ್ನು ಕಳೆದುಕೊಂಡಿದ್ದ ಹೆಡ್ ಕಾನ್‌ಸ್ಟೆಬಲ್ ಕೆಲವು ಕೌಟುಂಬಿಕ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಮೂಲಗಳು ತಿಳಿಸಿವೆ. ವೆಂಕಟೇಶ್ವರಲು ಮನೆಗೆ ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಕೌಶಲ್ ಭೇಟಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.