ಒಟ್ಟಾವ: ಖಲಿಸ್ತಾನಿಗಳ ವಿಚಾರದಲ್ಲಿ ಬಿಗಿ ಪಟ್ಟು ಹಿಡಿದಿರುವ ಭಾರತದ ಮುಂದೆ ತಲೆಬಾಗಿರುವ ಕೆನಡಾ, ಕೊನೆಗೂ ಕ್ರಮಕ್ಕೆ ಮುಂದಾಗಿದೆ. ದೇವಾಲಯಗಳನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 12ರಂದು, ಸರ್ರೆಯ ಲಕ್ಷ್ಮೀನಾರಾಯಣ ಮಂದಿರದ ಮುಂಭಾಗದ ಗೇಟ್ ಮತ್ತು ಡೋರ್‌ಗಳ ಮೇಲೆ ಖಲಿಸ್ತಾನಿ ಕಿಡಿಗೇಡಿಗಳು ಖಲಿಸ್ತಾನ್ ಪರ, ಹಿಂದೂ ವಿರೋಧಿ ಹಾಗೂ ಭಾರತ ವಿರೋಧಿ ಬರಹಗಳನ್ನು ಬರೆದು ಆವರಣವನ್ನು ಅಪವಿತ್ರಗೊಳಿಸಿದ್ದರು. ಆ ಬಳಿಕ ಕೆನಡಾದ ಪೊಲೀಸರು ಮಾಡಿದ ಮೊದಲ ಬಂಧನ ಇದಾಗಿದೆ.
ಆಗಸ್ಟ್ 12 ಮತ್ತು ಆಗಸ್ಟ್ 14ರಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರು ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್(RCMP) ನ ಸರ್ರೆ ಶಾಖೆಯ ವಕ್ತಾರರು ಹೇಳಿದ್ದಾರೆ. ಆದರೆ ಬಂಧಿಸಿದ ವ್ಯಕ್ತಿಯ ವಿವರಗಳನ್ನು ನೀಡಿಲ್ಲ.
ದೇವಾಲಯಗಳ ಎದುರು ಕಿಡಿಗೇಡಿಗಳು ಹಚ್ಚಿರುವ ಪೋಸ್ಟರ್‌ಗಳಲ್ಲಿ ನಿಜ್ಜರ್‌ನ ಹತ್ಯೆಯನ್ನು ಉಲ್ಲೇಖಿಸಲಾಗಿದೆ. ಜೂನ್ 18ರಂದು ಸರ್ರೆಯಲ್ಲಿ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಿಜ್ಜರ್‌ನನ್ನು ಹತ್ಯೆ ಮಾಡಲಾಗಿತ್ತು. ತದನಂತರ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಹಳಸಿದೆ. ಇತ್ತೀಚೆಗೆ ಅಲ್ಲಿನ ವಿದೇಶಾಂಗ ಸಚಿವರು, ʼಕೆನಡಾ ಖಾಸಗಿ ಮಾತುಕತೆಗೆ ಸಿದ್ಧʼ ಎಂದಿದ್ದರು.