ಪುತ್ತೂರು: ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ಪುತ್ತೂರು ವಿಭಾಗೀಯ ಕಚೇರಿ ಎದುರು ಬುಧವಾರ ಒಂದು ದಿನದ ಮುಷ್ಕರ ನಡೆಯಿತು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ, ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 750 ಮಂದಿ ಗ್ರಾಮೀಣ ಅಂಚೆ ನೌಕರರಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸು ಇನ್ನೂ ಅನುಷ್ಠಾನ ಆಗಿಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಅಂಚೆ ಇಲಾಖೆಗೆ ಆದಾಯ ಮಾಡಿಕೊಡುವ ನೌಕರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕೇಂದ್ರ ಸರಕಾರ ಹಾಗೂ ಅಂಚೆ ಇಲಾಖೆ ಮಾಡುತ್ತಿರುವ ತಾರತಮ್ಯವನ್ನು ನಾವು ವಿರೋಧಿಸುವುದಾಗಿ ಹೇಳಿದರು.
ಡಿ. 5ರಿಂದ ಅನಿರ್ಧಿಷ್ಟ ಮುಷ್ಕರ:
ಇಂದು ಸಾಂಕೇತಿಕ ಮುಷ್ಕರ ನಡೆಸಲಾಗಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿ. 5ರಿಂದ ಅನಿರ್ಧಿಷ್ಟ ಕಾಲದ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಂಚೆ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೆ ಇಲಾಖೆಯೇ ಹೊಣೆಯಾಗುತ್ತದೆ ಎಂದು ಸುನಿಲ್ ಎಚ್ಚರಿಕೆ ನೀಡಿದರು.
ಸಮಿತಿ ಅಧ್ಯಕ್ಷ ವಿಠಲ್ ಎಸ್. ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ಉಪ ವಿಭಾಗದ ಜಿಡಿಎಸ್ ನೌಕರರು ಧರಣಿಯಲ್ಲಿ ಪಾಲ್ಗೊಂಡರು.
ಪ್ರಮುಖ ಬೇಡಿಕೆಗಳು ಹೀಗಿವೆ:
8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸುವುದು.
ಸೇವಾ ಹಿರಿತನದ ಆಧಾರದ ಮೇಲೆ 12, 24, 36 ವರ್ಷ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್ಕ್ರಿಮೆಂಟ್ ನೀಡುವುದು.
ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸುವುದು.
ಗ್ರೂಪ್ ಇನ್ನೂರೆನ್ಸ್’ಗಳ ಕವರೇಜ್ 5 ಲಕ್ಷದವರೆಗೆ ಹೆಚ್ಚಿಸುವುದು
ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವುದು.
ಜಿಡಿಎಸ್ ಗ್ರಾಜ್ಯುವಿಟಿ ಹಣವನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸುವುದು.
188 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು.