ತುಮಕೂರು: ತುಮಕೂರು ಬಿಜೆಪಿ ರೈತ ಮೋರ್ಚಾ ಹಾಗೂ ಕರ್ನಾಟಕ ಸುಭಾಷ್ ಪಾಳೇಕರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಆಶ್ರಯದಲ್ಲಿ 101 ನಾಟಿ ಗೋವುಗಳ ವಿತರಣೆ ‘ಗೋ ದಾನ’ ಕಾರ್ಯಕ್ರಮ ಹಾಗೂ ಗೋ ಆಧಾರಿತ ಕೃಷಿಯ ಬಗ್ಗೆ ಮಾಹಿತಿ ಒಂದು ದಿನದ ಕಾರ್ಯಾಗಾರ ಅ. 3ರಂದು ತುಮಕೂರು ಕ್ಯಾತ್ಸಂದ್ರ ಶ್ರೀ ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ಸಭಾಭವನದಲ್ಲಿ ನಡೆಯಿತು.
ಶ್ರೀ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳ ಗೋದಾನಿ ರೈತರು ನೀಡಿದ ಗಂಡು, ಹೆಣ್ಣು ಗೋವನ್ನು ತುಮಕೂರು ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಿಂದ ಆಯ್ಕೆ ಮಾಡಿದ 50 ರೈತರಿಗೆ ದಾನ ರೂಪದಲ್ಲಿ ನೀಡಲಾಯಿತು. ಅಲ್ಲದೆ ಜೀವಾಮೃತ, ಬೀಜಾಮೃತ ತಯಾರಿ ತರಬೇತಿ ನೀಡಿ, ಗೋ ಆಧಾರಿತ ಕೃಷಿಕರಾಗಿ ಪರಿವರ್ತಿಸಿ, ಭೂಮಿಯನ್ನು ವಿಷ ಮುಕ್ತಗೊಳಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿ ಮೂಡಿಬಂತು.
ಕಾರ್ಯಾಗಾರದಲ್ಲಿ ಪ್ರಸನ್ನ ಮೂರ್ತಿ ಟಿ.ಆರ್. ಸುಭಾಷ್ ಪಾಳೇಕರ್ ಅವರು ಕೃಷಿ ಪದ್ಧತಿಯ ಸಂಪೂರ್ಣ ಮಾಹಿತಿ ನೀಡಿ, ನಾಟಿ ಹಸು, ಜವಾರಿ ಆಕಳು ಬಗ್ಗೆ ನಮಗೆ ಅತಿ ಕಡಿಮೆ ತಿಳುವಳಿಕೆ ಇದೆ. ಅವು ಕಡಿಮೆ ಹಾಲು ನೀಡುತ್ತವೆ ಎಂಬುದನ್ನು ಬಿಟ್ಟರೆ ಬೇರೇನು ಅಷ್ಟಾಗಿ ತಿಳಿದಿಲ್ಲ. ಈ ನಾಟಿ ಹಸುವಿನ ಹಿಂದೆ ಇರುವ ವೈಜ್ಞಾನಿಕ ಮಾಹಿತಿಯಂತೂ ನಮಗೆ ಗೊತ್ತೇ ಇಲ್ಲ ಎಂದ ಅವರು, ಮುಕ್ಕೋಟಿ ದೇವತೆಗಳ ವಾಸಸ್ಥಾನ ನಾಟಿ ಹಸು. ಒಂದು ನಾಟಿ ಹಸುವಿನ ಸಗಣಿ, ಗಂಜಲದಿಂದ 3೦ ಎಕರೆ ಸಮೃದ್ಧ, ಲಾಭದಾಯಕ ಕೃಷಿ ಮಾಡಬಹುದು ಎಂದು ತಿಳಿಸಿದರು.
ಎಸ್.ಪಿ. ಚಿದಾನಂದ, ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ವಿದ್ಯಾ ಸಹಕರಿಸಿದರು.