ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ 149ನೇ ಗಾಂಧೀ ಜಯಂತಿ ಆಚರಣೆ ಸಂದರ್ಭ ಪರಿಮಳಾ ಎನ್.ಎಂ. ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಭಾಷಾ ಶಿಕ್ಷಕಿಯಾಗಿರುವ ಪರಿಮಳಾ ಎನ್.ಎಂ. ಅವರು ಇತ್ತೀಚೆಗೆ ಬೆಳಗಾವಿಯ ಕನ್ನಡ ದೈನಿಕ ಸಂಸ್ಥೆಯಿಂದ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ, ಪರಿಮಳಾ ಅವರ ಶ್ರಮದ ಪರಿಣಾಮವಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈ ಸನ್ಮಾನದಿಂದ ನಮ್ಮ ಶಿಕ್ಷಕಿಯವರಿಗೆ ಆಗಬೇಕಾದದ್ದು ಏನೂ ಇಲ್ಲ. ಆದರೆ ಸಾಧಕರನ್ನು ಸನ್ಮಾನಿಸುವುದು ಮತ್ತು ಅದರ ಮೂಲಕ ಇತರ ಶಿಕ್ಷಕ-ಶಿಕ್ಷಕಿಯರನ್ನು ಸಾಧನೆಯ ಕಡೆಗೆ ಪ್ರಚೋದಿಸುವುದು ಈ ಸನ್ಮಾನದ ಹಿಂದಿರುವ ಪ್ರಮುಖ ಕಾರಣ ಎಂದರು.
ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಸನ್ಮಾನಿತರನ್ನು ಅಭಿನಂದಿಸಿದರು. ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರೇಕ್ಷಾ, ಅಪೂರ್ವ, ಇಂಚರ, ಜೀವಿತಾ ಪ್ರಾರ್ಥಿಸಿದರು. ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಸನ್ಮಾನಿತರನ್ನು ಪರಿಚಯಿಸಿದರು. ಜೀವಿತಾ ವಂದಿಸಿ, ಪ್ರೇಕ್ಷಾ ಎನ್.ಸಿ. ಕಾರ್ಯಕ್ರಮ ನಿರೂಪಿಸಿದರು.