ರಸ್ತೆ ಗುಂಡಿಗೆ ಬಿದ್ದು ಸಾಯುವುದು ಸಣ್ಣ ವಿಷಯವೇ ಎಂದು ಪ್ರಶ್ನೆ
ಬೆಂಗಳೂರು: ರಸ್ತೆ ಮತ್ತು ಚರಂಡಿ ಸಮಸ್ಯೆಗಳನ್ನು ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಲು ಗಮನಹರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿ ವಿವಾದವನ್ನು ಹುಟ್ಟುಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ ಸಣ್ಣ ವಿಷಯಗಳು. ಹೇಳಿಕೊಳ್ಳಲು ಅಭಿವೃದ್ಧಿಪರ, ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ಹೇಳಿದೆ.
ರಸ್ತೆ, ಚರಂಡಿ, ರಸ್ತೆಗುಂಡಿಗಳು ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ ಪಿಎಸ್ಐ ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ರಾಜ್ಯ ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ. ಬಿಟ್ ಕಾಯಿನ್ ಹಗರಣ, PSI ಅಕ್ರಮ, ಕೆಪಿಟಿಸಿಎಲ್ ಅಕ್ರಮ, ಸಾಲು ಸಾಲು ನೇಮಕಾತಿ ಅಕ್ರಮಗಳು, ಗುತ್ತಿಗೆದಾರರ ಆತ್ಮಹತ್ಯೆ, ರಸ್ತೆ ಗುಂಡಿಯ ಸಾವುಗಳು, ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ – ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ಕಾಂಗ್ರೆಸ್ ಸವಾಲೆಸೆದಿದೆ.
ನಾವು ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹಸಿವು, ಬೆಲೆ ಏರಿಕೆಯ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತಿರುವಾಗ, ಕಟೀಲ್ ಜನರ ಭಾವನೆಗಳ ಮೇಲೆ ಆಟವಾಡುತ್ತಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಬಿಜೆಪಿ ದ್ವೇಷವನ್ನು ಹರಡಲು ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಇದು ಅತ್ಯಂತ ಕೆಟ್ಟ ಸಂದೇಶವಾಗಿದೆ. ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ದ್ವೇಷ ಹರಡಿ ದೇಶ ಒಡೆಯಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಟೀಲ್, ‘ರಸ್ತೆ, ಚರಂಡಿಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಡಿ. ನಿಮಗೆ ನಿಮ್ಮ ಮಕ್ಕಳ ಭವಿಷ್ಯದ ಚಿಂತೆಯಿದ್ದರೆ ಲವ್ ಜಿಹಾದ್ ನಿಲ್ಲಿಸಬೇಕು. ಲವ್ ಜಿಹಾದ್ ತೊಡೆದುಹಾಕಲು ಬಿಜೆಪಿ ಬೇಕು ಎಂದು ಹೇಳಿದ್ದಾರೆ. ಗೋಹತ್ಯೆ ವಿರುದ್ಧ ಕಾನೂನು ತಂದಿದ್ದು, ಮತಾಂತರದ ವಿರುದ್ಧ ಕಾನೂನು ತಂದದ್ದು ಬಿಜೆಪಿ, ಲವ್ ಜಿಹಾದ್ ವಿರುದ್ಧ ಕಾನೂನು ತರುವುದು ಬಿಜೆಪಿಯೇ ಎಂದು ಕಟೀಲ್ ಹೇಳಿದ್ದರು.
ಕಾಂಗ್ರೆಸ್ ಅನ್ನು ಭಯೋತ್ಪಾದಕರ ಪಕ್ಷ ಎಂದು ಕರೆದಿರುವ ಕಟೀಲ್, ಕರ್ನಾಟಕದ ಜನತೆಗೆ ನವ ಕರ್ನಾಟಕ ಬೇಕೇ ಅಥವಾ ಭಯೋತ್ಪಾದಕರಿರುವ ಕರ್ನಾಟಕ ಬೇಕೇ ಎಂದು ಕೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ಹೆಚ್ಚಾಗಲಿದೆ. ಗೋಹತ್ಯೆ ಮತ್ತು ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಹಿಂಪಡೆಯುತ್ತಾರೆ ಎಂದಿದ್ದಾರೆ.