ಕರಾಚಿ: ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳಲು ಗಲ್ಫ್ ರಾಜ್ಯಕ್ಕೆ ಪ್ರಯಾಣಿಸಲು ಪ್ರಯತ್ನಿಸಿದ್ದಕ್ಕಾಗಿ ಯಾತ್ರಿಕರ ವೇಷದಲ್ಲಿದ್ದ ಹದಿನಾರು ಪಾಕಿಸ್ತಾನಿ ಭಿಕ್ಷುಕರನ್ನು ಸೌದಿ ಅರೇಬಿಯಾ ವಿಮಾನದಿಂದ ಇಳಿಸಿ ಬಂಧಿಸಲಾಗಿದೆ ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.
ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಎರಡು ದಿನಗಳ ಹಿಂದೆ ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿ ಸೌದಿ ವಿಮಾನದಿಂದ ಭಿಕ್ಷುಕರನ್ನು ಕೆಳಗಿಳಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಎಫ್‌ಐಎ ಪ್ರಕಾರ, ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಒಳಗೊಂಡ ಗುಂಪು ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿದ್ದರು.
ಭಾರಿ ಪ್ರಮಾಣದ ಪಾಕ್ ಭಿಕ್ಷುಕರು ಜಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಬಹಿರಂಗವಾದ ಒಂದು ದಿನದ ನಂತರ ಈ ಬಂಧನಗಳು ನಡೆದಿವೆ. ವಿದೇಶಗಳಲ್ಲಿ ಬಂಧಿತರಾಗಿರುವ ಶೇ. 90ರಷ್ಟು ಭಿಕ್ಷುಕರು ಪಾಕ್ ಗೆ ಸೇರಿದವರು ಎಂದು ಸಚಿವಾಲಯದ ಕಾರ್ಯದರ್ಶಿ ಸೆನೆಟ್ ಸಮಿತಿಗೆ ಬಹಿರಂಗಪಡಿಸಿದ್ದಾರೆ.
ಹೆಚ್ಚಿನವರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ನಂತರ ಭಿಕ್ಷಾಟನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಎಂದು ಪಾಕ್ ಸಾಗರೋತ್ತರ ಕಾರ್ಯದರ್ಶಿ ಜೀಶನ್ ಖಾನ್‌ಜಾಡಾ ಕಳೆದ ತಿಂಗಳು ಸೆನೆಟ್‌ನ ಸ್ಥಾಯಿ ಸಮಿತಿಯ ಸಭೆಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.