ಪುತ್ತೂರು: ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ, ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗೆ ’ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ ಪುತ್ತೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯ ಸ್ವಾಗತ ಮಾಡಿ ಬೈಕ್ ರ್ಯಾಲಿಯ ಮೂಲಕ ಪುತ್ತೂರಿನಿಂದ ಮುಂದಿನ ತಾಲೂಕಿಗೆ ಬೀಳ್ಕೊಡಲಾಯಿತು.
ಬೈಕ್ ರ್ಯಾಲಿಯನ್ನು ಪುತ್ತೂರಿನ ಕಾರ್ಯಕರ್ತರು ಸ್ವಾಗತಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ರ್ಯಾಲಿಯಲ್ಲಿ ಬಂದ 17 ಮಂದಿ ಸಹಿತ ಪುತ್ತೂರಿನ ಪ್ರಮುಖರಾದ ವಿಶ್ವಾಸ್ ಶೆಣೈ, ಮಣಿಕಂಠ, ನಿತಿನ್ ಕಲ್ಲೇಗ, ಕಿರಣ್ ಹೆಗ್ಗದೆ, ಮನೀಶ್ ಗೂನಡ್ಕ, ತ್ರಿಮುಖ್, ಚಂದ್ರಶೇಖರ್ ಎ.ಎಸ್., ಜಗದೀಶ್ ಶೆಣೈ, ಕಾರ್ತಿಕ್ ಭಕ್ತ, ಸಂಜಯ್ ಭಟ್, ನಿತಿನ್ ಶೆಣೈ, ರಾಮನಾಥ್ ಭಟ್, ಗಜಾನನ ಬಾಳಿಗ, ಅನಿಲ್ ನಾಯಕ್, ಗಣೇಶ್ ಕಾಮತ್ ಅವರು ಉಪಸ್ಥಿತರಿದ್ದರು. ಬಳಿಕ ರ್ಯಾಲಿಯನ್ನು ಬಿಳ್ಕೊಡಲಾಯಿತು.
ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್
ನಮೋ ಬ್ರಿಗೇಡ್ 2.0 ರಾಜ್ಯ ಸಹಸಂಚಾಲಕ ಚಂದ್ರಶೇಖರ್ ಮಾತನಾಡಿ, 2024ರಲ್ಲಿ ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಮೋದಿ ಮಾಡಿರುವ ಕೆಲಸವನ್ನು ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಬೈಕ್ ರ್ಯಾಲಿ ಮೂಲಕ ಮಾಡುತ್ತಿದ್ದೇವೆ. ಸೆ. 27ರಿಂದ ಕೋಲಾರದಿಂದ ನಮ್ಮ ರ್ಯಾಲಿ ಪ್ರಾರಂಭವಾಗಿದೆ. ಅ. 13ಕ್ಕೆ ಬೆಂಗಳೂರಿನಲ್ಲಿ ಸಮಾರೋಪ ಆಗಲಿದೆ. 2013ರಲ್ಲಿ ಭ್ರಷ್ಟಾಚಾರ ಮಾಡಿಕೊಂಡಿದ್ದವರು ಇಂದು ಒಂದಾಗಿ ಮೋದಿಯವರನ್ನು ಕೆಳಗಿಳಿಸಿ ಭಾರತದ ಅಧಿಕಾರ ಪಡೆಯಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಪುನಃ ಮೋದಿಯವರೇ ಪ್ರಧಾನಿಯಾಗಬೇಕೆಂದು ಪ್ರಚಾರ ಕೈಗೊಂಡಿದ್ದೇವೆ. ಮೋದಿ 9 ವರ್ಷ ಮಾಡಿರುವ ಕೆಲಸ ಫಲ ಕೊಡುವ ಸಮಯ ಬಂದಿದೆ. ಇಂತಹ ಸಮಯದಲ್ಲಿ ಅವರ ಆಡಳಿತ ಇಲ್ಲದಿದ್ದರೆ ಮತ್ತೆ ನಾವು 100 ವರ್ಷ ಹಿಂದೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಹೇಳಿದರು.