ಸವಣೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 146ನೇ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಠಾರ ಸ್ವಚ್ಛತೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಮವನ್ನು ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಇತಿಹಾಸವನ್ನು ನೆನಪಿಡಬೇಕಿದೆ. ಗಾಂಧೀಜಿಯವರು ಮಾಡಿದ ಸಾಧನೆ ಅತಿ ವಿಶೇಷವಾದದ್ದು ಮತ್ತು ಅವರ ಜೀವನಾದರ್ಶಗಳನ್ನು ನಾವು ಅನುಸರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕಿ ಪರಿಮಳಾ ಎನ್.ಎಂ. ಅವರನ್ನು ಸನ್ಮಾನಿಸಲಾಯಿತು.
ಹೋರಾಟದಿಂದ ಪಡೆದ ಸ್ವಾತಂತ್ರ್ಯ ದುರುಪಯೋಗ ಆಗದಿರಲಿ: ಅಶ್ವಿನ್ ಎಲ್. ಶೆಟ್ಟಿ
ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ಭಾರತದಲ್ಲಿ ಏಕಾಂಗಿಯಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವರು ಮಹಾತ್ಮ ಗಾಂಧೀಜಿ. ಇಂದು ನಾವು ಸ್ವಾತಂತ್ರ್ಯವನ್ನು ಬೇಕಾಬಿಟ್ಟಿ ದುರುಪಯೋಗ ಮಾಡುತ್ತಿದ್ದೇವೆ. ಇದು ನಿಲ್ಲಬೇಕು ಎಂದರು.
ವಿದ್ಯಾರ್ಥಿನಿ ಅಪೂರ್ವ ಗೋಕುಲ್ದಾಸ್ ಮತ್ತು ಆಂಗ್ಲಭಾಷಾ ಶಿಕ್ಷಕಿ ತೇಜಸ್ವಿಯವರು ಗಾಂಧೀ ಜೀವನದ ಕುರಿತು ಮಾತನಾಡಿದರು. ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಸೀತಾರಾಮ ಕೇವಳ ಸಾಧಕಿ ಶಿಕ್ಷಕಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಪ್ರೇಕ್ಷಾ, ಅಪೂರ್ವ, ಇಂಚರ, ಜೀವಿತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜೀವಿತಾ ವಂದಿಸಿದರು. ವಿದ್ಯಾರ್ಥಿನಿ ಪ್ರೇಕ್ಷಾ ಎನ್.ಸಿ. ಕಾರ್ಯಕ್ರಮ ನಿರೂಪಿಸಿದರು.