ಪುತ್ತೂರು: ಪುಸ್ತಕದ ಹಬ್ಬ ಪುಸ್ತಕ ದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅವರನ್ನು ಅವರ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ನಾವು ನೀಡಿದ ಸನ್ಮಾನವನ್ನು ಶ್ರೀ ಧರ್ಮಸ್ಥಳ ಮಂಜುನಾಥನ ಪ್ರಸಾದವೆಂದು ಸ್ವೀಕರಿಸಿದ ಭಾವಪೂರ್ಣ ಘಟನೆಗೆ ನಾವೆಲ್ಲ ಸಾಕ್ಷಿಯಾಗಿ ಧನ್ಯತಾ ಭಾವವನ್ನು ಇಂದು ಕಂಡಿದ್ದೇವೆ.
ವೆಂಕಟರಮಣ ಭಟ್ ಅವರು ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ. ಪ್ರಸ್ತುತ 91 ವರ್ಷದ ವಯೋಮಾನದಲ್ಲಿ ಕೂಡ ಉತ್ತಮ ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದಾರೆ. ದುರಾದೃಷ್ಟವಶಾತ್ ಅವರಿಗೆ ಕಣ್ಣಿನ ಸಮಸ್ಯೆಯಿಂದಾಗಿ ದೃಷ್ಟಿ ಸಂಪೂರ್ಣ ಮಂದವಾಗಿದೆ. ಆದರೆ ಹಳೆಯ ಪರಿಚಯದವರ ಸ್ವರವನ್ನು ಗುರುತಿಸಿ ಹೆಸರಿಸುವ ಜ್ಞಾಪಕ ಶಕ್ತಿ ಇಂದಿಗೂ ಅದ್ಭುತವಾಗಿದೆ.
ಪಾತಾಳ ವೆಂಕಟರಮಣ ಭಟ್ ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದ್ದು, ವಿಶೇಷವಾಗಿ ಸ್ತ್ರೀ ಪಾತ್ರಕ್ಕೆ ಜೀವ ತುಂಬಿದವರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ ಎಂದೇ ಹೇಳಬಹುದು. ಹಿರಿಯ ಮಗ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ. ಪಾತಾಳ ವೆಂಕಟರಮಣ ಭಟ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಯಕ್ಷಗಾನ ಕ್ಷೇತ್ರಕ್ಕೆ ಇವರು ನೀಡಿದ ಸುದೀರ್ಘ 70 ವರ್ಷದ ಸೇವೆಯನ್ನು ಸ್ಮರಿಸಿ ಗೌರವಿಸಿ ಆಶೀರ್ವಾದ ಪಡೆದ ಸಾರ್ಥಕ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ.
ನಿಜವಾಗಿಯೂ ಪದ್ಮಶ್ರೀ ಪ್ರಶಸ್ತಿಗೆ ಸರ್ವ ಅರ್ಹತೆಯನ್ನು ಪಡೆದಂತಹ ಹಿರಿಯ ಯಕ್ಷಗಾನ ಕಲಾವಿದರಾಗಿದ್ದಾರೆ. ಕರ್ನಾಟಕ ಸರಕಾರವು ಇವರ ಕಲಾ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದರು.