ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಡುವೆ ನಡೆದಿರುವ ಚುನಾವಣಾ ಮೈತ್ರಿಯ ವಿರುದ್ಧ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ. ಇಬ್ರಾಹಿಂ ಅಬ್ಬರಿಸಿದ್ದಾರೆ.
ʻʻಇಬ್ಬರು ಕೂತು ಮಾತನಾಡಿದರೆ ಮೈತ್ರಿ ಆಗಲ್ಲ. ನಾನು ರಾಜ್ಯಾಧ್ಯಕ್ಷನಿದ್ದೇನೆ. ಚುನಾಯಿತ ಆಧ್ಯಕ್ಷನಿದ್ದೇನೆʼʼ ಎಂದು ಗುಡುಗಿದ ಅವರು, ಮೈತ್ರಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಅಕ್ಟೋಬರ್ 16ರಂದು ಕರೆದಿರುವ ಸಮಾನ ಮನಸ್ಕರ ಸಭೆಯಲ್ಲಿ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಪ್ರಕಟಿಸಿದರು. ಅಂದು ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಮೈತ್ರಿಯ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರೆ ಮಾಡಿದ್ದರೂ, ತಾನು ಸ್ವೀಕರಿಸಿಲ್ಲ. ಬೇರೆಯವರ ಬಳಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯಿಸಿಲ್ಲ. ಅಕ್ಟೋಬರ್ 16ರ ಬಳಿಕ ಮಾತನಾಡುವುದಾಗಿ ಹೇಳಿದ್ದೇನೆ ಎಂದು ಸಿಎಂ ಇಬ್ರಾಹಿಂ ಶನಿವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ಎರಡು ಪಕ್ಷದ ನಡುವೆ ಮೈತ್ರಿಯೇ ಆಗಿಲ್ಲ ಎಂದ ಇಬ್ರಾಹಿಂ
ʻʻಎರಡು ಪಕ್ಷಗಳ ನಡುವೆ ಮೈತ್ರಿ ಆಗಿಯೇ ಇಲ್ಲ. ನಾನು ರಾಜ್ಯಾಧ್ಯಕ್ಷ ಆಗಿದ್ದೇನೆ. ನನ್ನನ್ನೇ ಮೈತ್ರಿ ಸಭೆಗೆ ಕರೆದಿಲ್ಲ. ನನ್ನ ಬಳಿ ಮಾತನಾಡಿಲ್ಲ. ಅದು ಹೇಗೆ ಮೈತ್ರಿ ಆಗುತ್ತದೆ? ಇವರ ಸಿದ್ಧಾಂತ ಅವರು ಒಪ್ಪಿಲ್ಲ. ಅವರ ಸಿದ್ದಾಂತ ಇವರು ಒಪ್ಪಿಲ್ಲ. ಅದು ಹೇಗೆ ಮೈತ್ರಿ ಆಗುತ್ತೆ?ʼʼ ಎಂದು ಪ್ರಶ್ನಿಸಿದ ಅವರು, ಈ ಮೈತ್ರಿಗೆ ಕಾರ್ಯಕರ್ತರ ಬೇಸರವಿದೆ ಎಂದು ಹೇಳಿದರು.
ʻʻನಾನು ಕುಮಾರಸ್ವಾಮಿ ಅವರ ಜತೆ ಇಲ್ಲಿಯವರೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ಅವರು ನನಗೆ ಸಹೋದರ, ದೇವೇಗೌಡರು ತಂದೆ ಸಮಾನ. ಆದರೂ ದೆಹಲಿಗೆ ಹೋದಾಗಲೂ ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ರಿ ಅದು ಹೇಳಿಲ್ಲ. ಪಕ್ಷದ ಅಧ್ಯಕ್ಷನಿಗೇ ಹೇಳಿಲ್ಲʼʼ ಎಂದು ಅವರು ನುಡಿದರು. ಮೈತ್ರಿ ಪಕ್ಷದ ತೀರ್ಮಾನ ಅಂತ ಕರೆಯಲು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಬೇಕು. ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಸಭೆ ನಡೆಸಿ ತೀರ್ಮಾನ ಅಂದ್ರಿ. ನನ್ನ ಬಳಿಯೇ ಮಾತನಾಡದೆ ಯಾವ ಕೋರ್ ಕಮಿಟಿ ಎಂದು ಕೇಳಿದರು ಇಬ್ರಾಹಿಂ.