ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ | ಶ್ರೀ ಡಾ. ಧರ್ಮಪಾಲಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ

ಪುತ್ತೂರು: ಭೈರವೈಕ್ಯರಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.


ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲಾನಂದ ಸ್ವಾಮೀಜಿ, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆಯನ್ನು ಮಾಡುವ ಸೌಭಾಗ್ಯ ಈ ಭಾಗದ ಜನರದ್ದಾಗಿದೆ. ಆದ್ದರಿಂದ ನಿರೀಕ್ಷೆಗಳೂ ಹೆಚ್ಚಿದೆ. ಸಮುದಾಯದ ಎಲ್ಲರೂ ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.


ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಹುದೊಡ್ಡ ಕಾರ್ಯಕ್ರಮವನ್ನು ನಾವು ಪುತ್ತೂರಿನಲ್ಲಿ ಆಯೋಜಿಸಿದ್ದೇವೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಆಗಬೇಕು ಎಂದರು.



































 
 


ಶಾಸಕ ಸಂಜೀವ ಮಠಂದೂರು ಮಾತನಾಡಿ, ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ತಯಾರಿಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಜೀವನದಲ್ಲಿ ನಡೆಯಲಿರುವ ಈ ಅವಿಸ್ಮರಣೀಯ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗಬೇಕು. ಸಮುದಾಯದ ಎಲ್ಲಾ ನಾಯಕರನ್ನು ಒಟ್ಟಾಗಿ ಸೇರಿಸಿ, ಕಾರ್ಯಕ್ರಮ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಎಲ್ಲರೂ ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ವಿನಂತಿಸಿದರು.


ಜಯಂತ್ಯೋತ್ಸವ ಸಂಸ್ಮರಣಾ ಸಮಿತಿಯ ಸಂಚಾಲಕ ಚಿದಾನಂದ ಬೈಲಾಡಿ ಮಾತನಾಡಿ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯಲ್ಲಿ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ರಜತ ತುಲಾಭಾರ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ಮಹಾಪ್ರಬಂಧದ ಗ್ರಂಥ ಅನಾವರಣ, ಮಹಾಲಿಂಗೇಶ್ವರ ಐಟಿಐನಲ್ಲಿ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.


ಇದೇ ಸಂದರ್ಭ ವಲಯವಾರು ಸಮಿತಿ, ಗ್ರಾಮವಾರು ಸಮಿತಿಯ ಪ್ರಮುಖರು ಅನಿಸಿಕೆ ವ್ಯಕ್ತಪಡಿಸಿದರು. ಸಮಿತಿಯ ಜಿಲ್ಲಾ ಪ್ರಮುಖರು, ತಾಲೂಕು ಪ್ರಮುಖರು ಹಾಗೂ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡ ವಿವಿಧ ವಿಭಾಗದ ಪ್ರಮುಖರು, ಒಕ್ಕಲಿಗ ಸಮುದಾಯ ಸಂಘದ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು, ಮೊದಲಾದವರು ಉಪಸ್ಥಿತರಿದ್ದರು.


ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಸ್ವಾಗತಿಸಿ, ಒಕ್ಕಲಿಗ ಗೌಡ ಯುವ ಸಮುದಾಯ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top