ಪುತ್ತೂರು: ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಸೆ.9ರಂದು ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ ತಾಯಿ-ಮಗನನ್ನು ಕಟ್ಟಿ ಹಾಕಿ ಚಿನ್ನ ಹಾಗೂ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಏಳನೇ ಪ್ರಮುಖ ಆರೋಪಿ ರವಿ ಪೆರೋಲ್ನಲ್ಲಿ ಹೊರಗೆ ಬಂದು ಈ ಕೃತ್ಯದಲ್ಲಿ ಭಾಗಿಯಾಗಿ ಮತ್ತೆ ಜೈಲಿನಲ್ಲಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ. ತಿಳಿಸಿದರು.
ಶುಕ್ರವಾರ ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಸೆ. 7ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಏಳು ಜನ ದರೋಡೆಕೋರರ ತಂಡ ಪಡುವನ್ನೂರು ಗ್ರಾಮದ ಗುರುಪ್ರಸಾದ್ ಅವರ ಮನೆಗೆ ಹಿಂದಿನ ಬಾಗಿಲು ಒಡೆದು ನುಗ್ಗಿ, ಗುರುಪ್ರಸಾದ್ ಹಾಗೂ ಅವರ ತಾಯಿಯನ್ನು ಕಟ್ಟಿಹಾಕಿ 30 ಸಾವಿರ ರೂ. ನಗದು ಹಾಗೂ 8 ಪವನ್ ಚಿನ್ನ ದರೋಡೆ ಮಾಡಿ ಪರಾರಿಯಾಗಿತ್ತು.
ಅಪರಾಧಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನಾಲ್ಕು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿತ್ತು. ಕೃತ್ಯಗಳಲ್ಲಿ ಭಾಗಿಯಾದವರು ಇಂತಹದ್ದೇ ಪ್ರಕರಣದ ಆರೋಪಿಗಳಾಗಿದ್ದರು ಎಂಬ ಮಾಹಿತಿಯನ್ನು ಕಲೆಹಾಕಿ, ಸೆ. 28ರಂದು ಮೂವರನ್ನು ನಿಡ್ಪಳ್ಳಿಯಲ್ಲಿ ಬಂಧಿಸಿದ್ದು, ಉಳಿದ ಆರೋಪಿಗಳನ್ನು ಸೆ. 29ರಂದು ಬೆಳಿಗ್ಗೆ ಕಾಸರಗೋಡಿನಲ್ಲಿ ಬಂಧಿಸಲಾಗಿತ್ತು ಎಂದು ತಿಳಿಸಿದರು.
ಕಾಸರಗೋಡಿನ ಮಂಜೇಶ್ವರ ತಾಲೂಕಿನ ಕಿರಣ್ ಟಿ. (29), ಬಂಟ್ವಾಳ ತಾಲೂಕಿನ ಕಿಣಿಯರ ಪಾಲು ಮನೆ ನಿವಾಸಿ ಸುಧೀರ್ ಕುಮಾರ್ ಕೆ. (38), ಕಾಂಞಂಗಾಡಿನ ಕಂಡತ್ತಿಲ್ ವೀಡುನ ರವಿ ಕೆ.ವಿ.(34), ಕಾಸರಗೋಡು ತಾಲೂಕಿನ ಸೀತಂಗೋಳಿ ರಾಜೀವಗಾಂಧಿ ಕಾಲೋನಿ ನಿವಾಸಿ ಮಹಮ್ಮದ್ ಫೈಝಲ್ (37), ಅಬ್ದುಲ್ ನಿಝಾರ್ (21), ಮಂಜೇಶ್ವರ ತಾಲೂಕಿನ ವಸಂತ ಎಂ. (31) ಎಂಬವರನ್ನು ಕಾಸರಗೋಡು ಜಿಲ್ಲೆಯ ಮುನಿಯಂಪಾಲ ಎಂಬಲ್ಲಿ ಬಂಧಿಸಲಾಗಿತ್ತು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, ತಲವಾರು, ಟಾರ್ಚ್ ಲೈಟ್ ಹಾಗೂ ಮೋಟಾರ್ ಸೈಕಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ದರೋಡೆ ಕೃತ್ಯದ ಪ್ರಮುಖ ಆರೋಪಿ ರವಿ ಈಗಾಗಲೇ ಕೇರಳದ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದು, ಪೆರೋಲ್’ನಲ್ಲಿ ಹೊರಗೆ ಬಂದಿದ್ದು, ಪಡುವನ್ನೂರು ಗ್ರಾಮದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮತ್ತೆ ಪೆರೋಲ್ ಅವಧಿ ಮುಗಿದಿದ್ದು, ಜೈಲು ಸೇರಿದ್ದಾನೆ. ಇನ್ನೋರ್ವ ಆರೋಪಿ ಸುಧೀರ್ ಎಂಬಾತನ ಮೇಲೆ ಈಗಾಗಲೇ ವಿಟ್ಲ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸಂತ ಎಂಬಾತನ ಮೇಲೆ ಬದಿಯಡ್ಕದ ಕುಂಬಳ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ. ಕಿರಣ್ ಎಂಬಾತನ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸುಲಿಗೆ, ಬರ್ಕೆ ಹಾಗೂ ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ. ಸನಲ್ ಕೆ.ವಿ. ಎಂಬಾತನ ಮೇಲೆ ಕೇರಳ ರಾಜ್ಯದಲ್ಲಿ 15 ಪ್ರಕರಣಗಳು ದಾಖಲಾಗಿದೆ. ನಾಲ್ಕು ಪ್ರಕರಣದಲ್ಲಿ 9 ವರ್ಷ ಜೈಲು ಶಿಕ್ಷೆ ಪೂರೈಸಿ ಹೊರಗೆ ಬಂದಿದ್ದ. ಮಹಮ್ಮದ್ ಫೈಝಲ್ ಎಂಬಾತನ ಮೇಲೆ ವೃದ್ಧೆಯ ಚೈನು ಎಳೆದು ಸುಲಿಗೆ ಮಾಡಿದ ಕಾರಣಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಾಗೂ ವಿಟ್ಲದ ಪೆಟ್ರೋಲ್ ಪಂಪಿನಲ್ಲಿ ಕಳವು ಹಾಗೂ ಮಂಜೇಶ್ವರ, ಕುಂಬಳೆ ಠಾಣೆಯಲ್ಲಿ ಕಳವು ಪ್ರಕರಣದಲ್ಲಿ ಕೇಸು ದಾಖಲಾಗಿದೆ. ನಿಸಾರ್ ಎಂಬಾತ ಬೆಟ್ಟಂಪಾಡಿಯಲ್ಲಿ ಚೈನ್ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್.ಎಂ. ಅವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಡಾ. ಗಾನ ಪಿ.ಕುಮಾರ್ ಅವರ ಮಾರ್ಗದರ್ಶನದ ವಿಶೇಷ ಪತ್ತೆತಂಡ ರಚಿಸಿದ್ದು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಉದಯರವಿ ಎಂ.ವೈ, ಗ್ರಾಮಾಂತರ ಠಾಣಾ ಪಿಎಸ್ಐ ಧನಂಜಯ ಬಿ.ಸಿ., ಉಪ್ಪಿನಂಗಡಿ ಠಾಣಾ ಪಿಎಸ್ಐ ರುಕ್ಮ ನಾಯ್ಕ್, ಹೆಚ್ಸಿ ಹರೀಶ್ಚಂದ್ರ, ವೇಣೂರು ಠಾಣಾ ಹೆಚ್.ಸಿ. ಪ್ರವೀಣ್ ಮೂರುಗೋಳಿ, ವಿಟ್ಲ ಠಾಣಾ ಹೆಚ್.ಸಿ. ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಹೆಚ್.ಸಿ. ಅಬ್ದುಲ್ ಸಲೀಂ, ಪಿ.ಸಿ. ಜಗದೀಶ್ ಅತ್ತಾಜೆ, ಎಎಚ್ಸಿ ಹರೀಶ್, ಗ್ರಾಮಾಂತರ ಠಾಣೆಯ ಎಎಸ್ಐ ಮುರುಗೇಶ್, ಹೆಚ್ಸಿಗಳಾದ ಪ್ರವೀಣ್ ರೈ, ಅದ್ರಾಮ್, ಬಾಲಕೃಷ್ಣ, ಹರೀಶ್, ಪ್ರಶಾಂತ್, ಪಿಸಿ ಮುನಿಯ ನಾಯ್ಕ್, ಪುತ್ತೂರು ಸಂಚಾರ ಠಾಣಾ ಹೆಚ್ಸಿ ಪ್ರಶಾಂತ್ ರೈ, ಪಿಸಿಗಳಾದ ವಿನಾಯಕ ಎಸ್. ಬಾರ್ಕಿ, ಶರಣಪ್ಪ ಪಾಟೀಲ್, ಸಂಪತ್ ಕುಮಾರ್, ಸಿಪಿಸಿ ದಿವಾಕರ್, ವಾಹನ ಚಾಲಕ ಪ್ರವೀಣ್ ಹಾಗೂ ಗ್ರಾಮಾಂತರ ಠಾಣಾ ಅಧಿಕಾರಿಗಳು, ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್, ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ರವಿ ಬಿ.ಎಸ್., ಪುತ್ತೂರು ಸಂಚಾರ ಠಾಣಾ ಪಿಎಸ್ಐ ಉದಯರವಿ ಉಪಸ್ಥಿತರಿದ್ದರು.