ಪುತ್ತೂರು: ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆ ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ತಹಶೀಲ್ದಾರ್ ಶಿವಶಂಕರ್ ಜೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಸರಕಾರಿ ಜಾಗ ಮಂಜೂರಾದ ಕುರಿತು ಭಾರೀ ಚರ್ಚೆಗೆ ಗ್ರಾಸವಾಯಿತು.
ಕೇರಳದ ವ್ಯಕ್ತಿಯೊಬ್ಬರಿಗೆ 2022 ರಲ್ಲಿ 2.45 ಎಕ್ರೆ ಸರಕಾರಿ ಜಮೀನು ಮಂಜೂರಾಗಿದೆ. ಆದರೆ ಇಲ್ಲೇ ಇರುವ ಬಡವರಿಗೆ ಡಿ.ಸಿ.ಮನ್ನಾ ಭೂಮಿಯಲ್ಲೂ ಮನೆ ಕಟ್ಟಲು ಅವಕಾಶವಿಲ್ಲ. ಈ ವ್ಯವಸ್ಥೆ ಯಾಕೆ ಎಂದು ಗಿರಿಧರ ನಾಯ್ಕ್ ಸಭೆಯಲ್ಲಿ ಪ್ರಶ್ನಿಸಿದರು. ಈ ಕುರಿತು ಮುಂದಿನ 20 ದಿನದೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಡವರು ಎಸ್‌ಸಿ ಸಮುದಾಯದವರು ಸಾಲ ಕೇಳಲು ಹೋದರೆ ಡಾಕ್ಯುಮೆಂಟ್ ಸರಿಯಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ. ಬ್ಯಾಂಕ್‌ಗೆ ಅಲೆಯುವುದೇ ಕೆಲಸವಾಗಿದೆ. ಸರಕಾರದಿಂದ ಬಡವರಿಗೆ ವಿವಿಧ ಯೋಜನೆಯಲ್ಲಿ ಸಾಲ ಸೌಲಭ್ಯವಿದೆ. ಅದನ್ನು ಪಡೆದುಕೊಳ್ಳಲಾಗುತ್ತಿಲ್ಲ. ಈ ಬಗ್ಗೆ ಬ್ಯಾಂಕ್‌ನವರು ಸಭೆಗೆ ಬಂದು ಸರಿಯಾದ ಮಾಹಿತಿ ನೀಡಲಿ. ಈ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಶಿಕ್ಷಣಾಧಿಕಾರಿ ಲೋಕೇಶ್ ಅವರು ಇಲಾಖೆಯ ಮಾಹಿತಿ ನೀಡುತ್ತಾ, ಈಗಾಗಲೇ 10 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಉಳಿದಂತೆ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ, ಯೋಜನಾ ನಿರ್ದೇಶಕಿ ಸುಕನ್ಯಾ, ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಸಭೆಯಲ್ಲಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.