ನವದೆಹಲಿ: ಪಾಕಿಸ್ತಾನ ಶೀಘ್ರದಲ್ಲೇ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು 200ಕ್ಕೆ ಏರಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಹೇಳಿದೆ. ಸದ್ಯ ಸುಮಾರು 170ರಷ್ಟು ಪರಮಾಣು ಶಸ್ತ್ರಾಸ್ತ್ರ ದಾಸ್ತಾನು ಹೊಂದಿದೆ.
ಪಾಕಿಸ್ತಾನವು ಪ್ರಸ್ತುತ 170 ಅಣ್ವಸ್ತ್ರ ಸಿಡಿತಲೆಗಳ ಸಂಗ್ರಹವನ್ನು ಹೊಂದಿದ್ದು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಾಲಿ ಬೆಳವಣಿಗೆಯನ್ನು ಗಮನಿಸಿದರೆ ಈ ಸಂಗ್ರಹವು 2025ರ ವೇಳೆಗೆ 200 ದಾಟುವ ಸಾಧ್ಯತೆ ಇದೆ ಎಂದು ಅಮೆರಿಕದ ಪರಮಾಣು ವಿಜ್ಞಾನಿಗಳ ಬುಲೆಟಿನ್‌ನಲ್ಲಿ ಪ್ರಕಟವಾದ ನ್ಯೂಕ್ಲಿಯರ್ ನೋಟ್‌ಬುಕ್ ಅಂಕಣದಲ್ಲಿ ಹೇಳಿದೆ.
“ಪಾಕಿಸ್ತಾನವು ಈಗ ಸರಿಸುಮಾರು 170 ಸಿಡಿತಲೆಗಳ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೊಂದಿದೆ ಎಂದು ನಾವು ಅಂದಾಜಿಸಿದ್ದೇವೆ. 1999ರಲ್ಲಿ 60ರಿಂದ 80ರಷ್ಚಿದ್ದ ಅಣ್ವಸ್ತ್ರಗಳ ಸಂಖ್ಯೆ 2020ರ ವೇಳೆಗೆ ಗಣನೀಯವಾಗಿ ಹೆಚ್ಚಿದೆ ಎಂದು ಅಮೆರಿಕ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಅಂದಾಜಿಸಿದೆ. ಆದರೆ ನಂತರ ಹಲವಾರು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿಯೋಜಿಸಲಾಗಿದ್ದು, ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೆಪ್ಟೆಂಬರ್ 11ರಂದು ಪರಮಾಣು ವಿಜ್ಞಾನಿಗಳ ಬುಲೆಟಿನ್‌ನಲ್ಲಿ ಪ್ರಕಟವಾದ ನ್ಯೂಕ್ಲಿಯರ್ ನೋಟ್‌ಬುಕ್ ಅಂಕಣವು ಹೇಳಿದೆ.
“ನಮ್ಮ ಅಂದಾಜು ಗಣನೀಯ ಅನಿಶ್ಚಿತತೆಯೊಂದಿಗೆ ಬರುತ್ತದೆ. ಏಕೆಂದರೆ ಪಾಕಿಸ್ತಾನ ಅಥವಾ ಇತರ ದೇಶಗಳು ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸುವುದಿಲ್ಲ” ಎಂದು ವಿಜ್ಞಾನಿಗಳು ಹೇಳಿದ್ದಾರೆ.