ಪುತ್ತೂರು: ನಗರಸಭೆ ಪೌರ ಕಾರ್ಮಿಕರ ದಿನ ಆಚರಣೆ ಮಾಡುವ ಮೂಲಕ ಪೌರಕಾರ್ಮಿಕರ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಗುರುವಾರ ನಗರಸಭೆ ವತಿಯಿಂದ ಪುರಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ, ವಿಶೇಷ ಭತ್ತೆ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭಾ ವ್ಯಾಪ್ತಿಯ ಪ್ರತಿ ಮನೆಗಳ ಪರಿಸರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ ಎಂದ ಅವರು, ವಿಶೇಷವಾಗಿ ನಗರಸಭೆ ವ್ಯಾಪ್ತಿಯ ಪ್ರತೀ ವಾರ್ಡಿನ ಮಣ್ಣು ಸಂಗ್ರಹಣೆ ಮಾಡಿ ದೆಹಲಿಗೆ ಕಳುಹಿಸುವ ಕಾರ್ಯಕ್ಕೂ ಇಲ್ಲಿ ಚಾಲನೆ ನೀಡಲಾಗಿದೆ. ಇದೊಂದು ಐತಿಹಾಸಿಕ ದಿನವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ಶಿವಶಂಕರ್ ಮಾತನಾಡಿ, ಪೌರ ಕಾರ್ಮಿಕರ ಕೊಡುಗೆ ಸಮಾಜಕ್ಕೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಈಗಾಗಲೇ ಪುತ್ತೂರು ನಗರಸಭೆಯಲ್ಲಿ 30 ಮಂದಿ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಪೌರ ಕಾರ್ಮಿಕರು ತಮ್ಮ ವಾರ್ಡಿಗೆ ಕಸ ಸಂಗ್ರಹಣೆಗೆ ತೆರಳುವಾಗ ಅವರನ್ನು ಸ್ವಚ್ಛತಾ ಸೇನಾನಿ ಎಂದು ಕರೆಯುವಂತಾಗಬೇಕು. ಈ ನಿಟ್ಟಿನಲ್ಲಿ ವಾರ್ಡಿನವರು ಸಹಕರಿಸಬೇಕು. ಅಲ್ಲದೆ ಪ್ರತೀ ವಾರ್ಡಿನಲ್ಲಿ ವರ್ಷಕ್ಕೆ ಒಮ್ಮೆಯಾದರೂ ತಮ್ಮ ತಮ್ಮ ವಾರ್ಡಿನ ಸದಸ್ಯರು ಆ ವಾರ್ಡಿಗೆ ಬರುವ ಪೌರ ಕಾರ್ಮಿಕರನ್ನು ಸನ್ಮಾನ ಮಾಡುವಂತಾಗಬೇಕು ಎಂಬ ಬೇಡಿಕೆಯಿದೆ ಎಂದು ತಿಳಿಸಿದ ಅವರು, ಈಗಾಗಲೇ ಪೌರ ಕಾರ್ಮಿಕರಿಗೆ ವಸತಿ ಯೋಜನೆಗಾಗಿ ಜಾಗದ ಸಮಸ್ಯೆಯಿದೆ. ಈ ನಿಟ್ಟಿನಲ್ಲಿ ಈ ಪ್ರಕ್ರಿಯೆ ಹಿಂದೆ ಬಿದ್ದಿದೆ. ಸರಕಾರಿ ಜಾಗ ಸಿಕ್ಕಿದಲ್ಲಿ ಖಂಡಿತವಾಗಿಯೂ ವಸತಿ ಯೋಜನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 6ನೇ ಸ್ಥಾನ ಇದ್ದ ಪುತ್ತೂರು ನಗರಸಭೆ ಮೂರನೇ ಸ್ಥಾನಕ್ಕೆ ಬಂದಿದೆ. ಮುಂದಿನ ನಮ್ಮ ಗುರಿ ಒಂದನೇ ಸ್ಥಾನ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು, ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದಲ್ಲಿ ಒಂದನೇ ಸ್ಥಾನಕ್ಕೆ ಬರಲು ಯಾವುದೇ ಸಂಶಯವಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಧ್ಯಾಪಕ ಡಾ.ಹರಿಪ್ರಸಾದ್ ಮಾತನಾಡಿ, ಒಂದು ಮನೆಯ ಬಾಳ್ವಿಕೆಗೆ ಅಡಿಪಾಯ ಹೇಗೆ ಮುಖ್ಯ ಪಾತ್ರ ವಹಿಸುತ್ತದೋ ಅದೇ ರೀತಿ ನಗರ ಸ್ವಚ್ಛತೆಗೆ ಅಡಿಪಾಯ ಪೌರ ಕಾರ್ಮಿಕರು. ಪೌರ ಕಾರ್ಮಿಕರು ಇಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ ಎಂದ ಅವರು, ಯಾವುದೇ ವೃತ್ತಿಯಿರಲಿ ತಮ್ಮ ವೃತ್ತಿಯನ್ನು ಮೊದಲು ಗೌರವಿಸಬೇಕು. ಪೌರ ಕಾರ್ಮಿಕರು ಶ್ರಮಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಸರಕಾರ, ಅಧಿಕಾರಿಗಳು ತೆಗೆದುಕೊಳ್ಳುವ ಯೋಜನೆ, ಯೋಚನೆ ಅನುಷ್ಠಾನ ಆಗಬೇಕಾದರೆ ಕೆಳಮಟ್ಟದ ಕಾರ್ಮಿಕರ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಆರೋಗ್ಯದ ಕುರಿತ ಕಾಳಜಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪೌರ ಕಾರ್ಮಿಕರಾದ ಗುಲಾಬಿ ಹಾಗೂ ದಯಾನಂದ ಅವರನ್ನು ಸನ್ಮಾನಿಸಲಾಯಿತು. ಖಾಯಂ ಆಗಿ ನೇಮಕಗೊಂಡ 30 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಸ್ಮರಣಿಕೆಯೊಂದಿಗೆ ವಿಶೇಷ ಭತ್ತೆ ನೀಡಲಾಯಿತು. ಪೌರ ಕಾರ್ಮಿಕರಿಗೆ ಹಮ್ಮಿಕೊಂಡ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ನಗರಸಭೆ ಪ್ರತೀ ವಾರ್ಡಿನಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಗೆ ಕಳುಹಿಸು ಕೊಡುವ ನಿಟ್ಟಿನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ, ಸಿಬ್ಬಂದಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಆರ್. ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಮೊದಲು ನಗರದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಸಮೀಪದಿಂದ ಪೌರ ಕಾರ್ಮಿಕರ ಜಾಥಾ ಕೋರ್ಟ್ ರಸ್ತೆಯಾಗಿ ಪುರಭವನ ತನಕ ನಡೆಯಿತು.