ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ | ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯಾಧಿಕಾರಿ | ಫಾಗಿಂಗ್ ಯಂತ್ರ ಖರೀದಿಸಲು ಗ್ರಾ.ಪಂ.ಗಳಿಗೆ ಸೂಚನೆ

ಪುತ್ತೂರು: ತಾ.ಪಂ. ಸಾಮಾನ್ಯ ಸಭೆ ಬುಧವಾರ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ನಡೆಯಿತು.

ಆಡಳಿತಾಧಿಕಾರಿ ಸಂಧ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾಲೂಕಿನಲ್ಲಿ ಡೆಂಗ್ಯೂ ಜ್ವರ ಸಂಖ್ಯೆ ಹೆಚ್ಚಾಗಿರುವ ಕುರಿತು ಮಾಹಿತಿ ನೀಡಿ, ಪ್ರತಿ ಗ್ರಾ.ಪಂ.ಗಳಲ್ಲಿ ಫಾಗಿಂಗ್ ಯಂತ್ರ ಇರಬೇಕು ಅನ್ನುವ ಬಗ್ಗೆ ಹಿಂದೆ ತಿಳಿಸಲಾಗಿತ್ತಾದರೂ ಕೆಲ ಪಂಚಾಯಿತಿಗಳಲ್ಲಿ ಇಲ್ಲ. ಇದರಿಂದ ಕಾರ್ಯಾಚರಣೆಗೆ ಸಮಸ್ಯೆ ಉಂಟಾಗಿದೆ ಎಂದರು.

ಇಓ ನವೀನ್ ಭಂಡಾರಿ ಮಾತನಾಡಿ, ಫಾಗಿಂಗ್ ಯಂತ್ರ ಖರೀದಿಸುವಂತೆ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿತ್ತು. ಕೆಲ ಪಂಚಾಯಿತಿಯವರು ಖರೀದಿಸಿದ್ದಾರೆ. ಉಳಿದವರಿಗೆ ಖರೀದಿ ಮಾಡುವಂತೆ ಸೂಚನೆ ನೀಡಲಾಗುವುದು ಎಂದರು.



































 
 

ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿಗೆ ಅಲ್ಲಲ್ಲಿ ಹೆಲ್ತ್ ಮೇಳ ನಡೆಯುತ್ತಿದೆ. ಇದಕ್ಕೆ ಗ್ರಾಮ ಒನ್ ಕೇಂದ್ರದವರು ಬರಬೇಕು. ಆದರೆ ಹೆಚ್ಚಿನವರು ಬರುತ್ತಿಲ್ಲ ಎಂದು ಆರೋಗ್ಯಾಧಿಕಾರಿ ಡಾ|ದೀಪಕ್ ರೈ ಸಭೆಯ ಗಮನಕ್ಕೆ ತಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಕಾಲುಬಾಯಿ ಲಸಿಕೆ ಅಭಿಯಾನ ನಡೆಯುತ್ತಿದ್ದು, ಸಂಚಾರಕ್ಕೆ ಪೂರಕವಾಗಿ ಗ್ರಾ.ಪಂ. ವತಿಯಿಂದ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ಪಶು ಇಲಾಖೆಯ ಅಧಿಕಾರಿ ಹೇಳಿದರು.

ಬೀದಿ ಶ್ವಾನಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಗ್ರಾ.ಪಂ.ಗಳಲ್ಲಿ 50 ಸಾವಿರ ರೂ. ಅನುದಾನ ಮೀಸಲಿಡಬೇಕು ಅನ್ನುವ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಇಓ ಭರವಸೆ ನೀಡಿದರು.

ಬಿಸಿಎಂ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವಾಗ ಆ ವಿದ್ಯಾರ್ಥಿ ಕಲಿಯುವ ಶಿಕ್ಷಣ ಸಂಸ್ಥೆಗೆ ಹತ್ತಿರ ಇರುವ ಹಾಸ್ಟೆಲ್‌ಗೆ ಸೇರ್ಪಡೆ ಮಾಡುವುದು ಉತ್ತಮ. ಕಳೆದ ವರ್ಷದ ತನಕ ತಾಲೂಕು ಮಟ್ಟದಲ್ಲೇ ಆಯ್ಕೆ ನಡೆಯುತ್ತಿರುವಾಗ ಈ ನಿಯಮ ಪಾಲನೆ ಆಗುತಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ರಾಜ್ಯಮಟ್ಟದಲ್ಲೇ ಹಾಸ್ಟೆಲ್ ನಿಗದಿ ಆಗುವ ಕಾರಣ ಶಿಕ್ಷಣ ಸಂಸ್ಥೆ ಇರುವ ಸ್ಥಳದಿಂದ ಹಲವಾರು ಕಿ.ಮೀ. ದೂರದಲ್ಲಿ ಇರುವ ಹಾಸ್ಟೆಲ್‌ಗಳಲ್ಲಿ ಪ್ಲೇಸ್‌ಮೆಂಟ್ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಅನ್ನುವ ಅಂಶ ಸಭೆಯಲ್ಲಿ ಪ್ರಸ್ತಾವಗೊಂಡಿತ್ತು. ಈ ಬಗ್ಗೆ ಜಿಲ್ಲಾಮಟ್ಟದ ಸಭೆಯಲ್ಲಿ ಚರ್ಚಿಸುವುದಾಗಿ ಆಡಳಿತಾಧಿಕಾರಿ ಭರವಸೆ ನೀಡಿದರು.

ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದುವರೆಗೆ ಕಂಡು ಬಂದಿಲ್ಲ ಎಂದು ಬಿಇಓ ಲೋಕೇಶ್ ಎಸ್.ಆರ್. ಹೇಳಿದರು.

ಸರಕಾರಿ ಕಾರ್ಯಕ್ರಮಗಳಲ್ಲಿ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಡಳಿತಾಧಿಕಾರಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸರಕಾರಿ ಹಾಸ್ಟೆಲ್‌ಗಳಿಗೆ ಸಚಿವರು, ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಸ್ವಚ್ಛತೆ, ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಸಿಬ್ಬಂದಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.

ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಕಳುಹಿಸುವ ಬೇಡಿಕೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ನಿಯಮ ಪ್ರಕಾರ ಗ್ರಾಮಸಭೆಗೆ ಗ್ರಾಮಮಟ್ಟದ ಅಧಿಕಾರಿಗಳು ಉಪಸ್ಥಿತರಿರಬೇಕು ಹೊರತು ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲ. ಚರ್ಚಾ ನಿಯಂತ್ರಣಾಧಿಕಾರಿ ಮಾತ್ರ ತಾಲೂಕು ಮಟ್ಟದ ಅಧಿಕಾರಿ ಆಗಿರುತ್ತಾರೆ. ಈ ವಿಚಾರವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕು ಎಂದರು.
ವೇದಿಕೆಯಲ್ಲಿ ಯೋಜನಾಧಿಕಾರಿ ಸುಕನ್ಯಾ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top