ಪುತ್ತೂರು: ಸ್ಥಳೀಯ ಉದ್ದಿಮೆದಾರರನ್ನೊಳಗೊಂಡ ನೂತನವಾಗಿ ರಚಿಸಲಾದ ಜೆಕಮ್ ಪುತ್ತೂರು ಟೇಬಲ್-1.0 ಉದ್ಘಾಟನಾ ಸಮಾರಂಭ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ. 28ರಂದು ಸಂಜೆ 6.30ಕ್ಕೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ನಡೆಯಲಿದೆ ಎಂದು ಜೆಸಿಐ ವಲಯ 15ರ ಚೆಯರ್ ಮ್ಯಾನ್ ಶಶಿರಾಜ್ ರೈ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೊಂದು ವ್ಯವಹಾರಿಕವಾದ ಸಂಘಟನೆಯಾಗಿದ್ದು, ಜೆಸಿಐ ಸಂಸ್ಥೆಯ ಒಂದು ಅಂಗ ಸಂಸ್ಥೆಯೂ ಆಗಿದೆ ಎಂದು ತಿಳಿಸಿದರು.
ಎಲ್ಲಾ ಉದ್ದಿಮೆದಾರರನ್ನು ಈ ಸಂಘಟನೆಯ ವ್ಯವಸ್ಥೆಯಲ್ಲಿ ತಂದು, ಉದ್ದಿಮೆಯನ್ನು ಬೆಳೆಸುವುದು, ಎದುರಿಸುತ್ತಿರುವ ಸಂಕಷ್ಠಗಳಿಂದ ಹೇಗೆ ಹೊರಬರುವುದು, ಯಶಸ್ವಿಯಾಗಿ ಉದ್ದಿಮೆಗಳನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನೂ ನೀಡಲಾಗುವುದು. ಇದು ಸಂಘಟನೆಯ ಉದ್ದೇಶವೂ ಆಗಿದೆ ಎಂದರು.
ಈಗಾಗಲೇ 22 ಮಂದಿ ಬೇರೆ ಬೇರೆ ಕ್ಷೇತ್ರದ ಉದ್ದಿಮೆದಾರರು ನೋಂದಾವಣೆ ಮಾಡಿಕೊಂಡಿದ್ದು, 15 ಜನ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲು ತಮ್ಮ ಹೆಸರುಗಳನ್ನು ನೀಡಿದ್ದಾರೆ. ಮುಖ್ಯವಾಗಿ ಸ್ಥಳೀಯ ಉದ್ದಿಮೆದಾರರಿಗೆ ಬೆಂಬಲವಾಗಿ ಸಂಸ್ಥೆ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಉದ್ದಿಮೆದಾರರನ್ನು ಈ ವ್ಯವಸ್ಥೆಯೊಳಗೆ ತಂದು ಬೇರೆ ಬೇರೆ ವಿಭಾಗಗಳನ್ನಾಗಿ ಮಾಡಲಾಗುವುದು. ಜತೆಗೆ ಸಂಘಟನೆಯಲ್ಲಿ ನೋಂದಾವಣೆ ಮಾಡಿಕೊಂಡ ಉದ್ದಿಮೆಗಳು ಯಶಸ್ವಿಯಾಗಲು ಆಪ್ ಗಳನ್ನು ರಚಿಸಲಾಗುವುದು. ಈ ಮೂಲಕ ಮುಂದಿನ ಒಂದು ವರ್ಷದ ವ್ಯವಹಾರಗಳನ್ನು ಉದ್ದಿಮೆದಾರರ ಮುಂದಿಡಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಉದ್ಘಾಟನೆಯನ್ನು ಪುತ್ತೂರು ಛೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ವಾಮನ್ ಪೈ ನೆರವೇರಿಸಲಿದ್ದು, ಸಮಾರಂಭದಲ್ಲಿ ವಲಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ರಾಷ್ಟ್ರೀಯ ಉಪ ಚೆರ್ ಮ್ಯಾನ್ ವಿ.ಬ್ರಬು, ಜೇಕಮ್ ಚೆಯರ್ ಮ್ಯಾನ್ ಶಶಿರಾಜ್ ರೈ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಜೇಕಮ್ ಟೇಬಲ್ ಚೆಯರ್ ಮ್ಯಾನ್ ಅನೂಪ್ ಕೆ.ಜೆ., ಕಾರ್ಯದರ್ಶಿ ಮಾಲಿನಿ, ಟ್ರೆಜರರಿ ಸುಹಾಸ್ ಉಪಸ್ಥಿತರಿದ್ದರು.