ಪುತ್ತೂರು: ಯಾರಿಗೂ ಒಂದೇ ಸಲಕ್ಕೆ ಅತ್ಯುತ್ತಮ ವೇದಿಕೆಗಳು ಲಭ್ಯವಾಗುವುದಿಲ್ಲ. ಹಂತಹಂತವಾಗಿ ಬೆಳೆಯುವುದರ ಮೂಲಕ ಉನ್ನತ ವೇದಿಕೆಗಳವರೆಗೆ ತಲುಪುವುದಕ್ಕೆ ಸಾಧ್ಯವಿದೆ. ಹಾಗಾಗಿ ಕಾಲೇಜುಗಳಲ್ಲಿ ದೊರಕುವ ಸಣ್ಣ ಪುಟ್ಟ ಅವಕಾಶಗಳನ್ನೂ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.
ಅವರು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸುತ್ತಿರುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಒಬ್ಬರೊಂದಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೂ, ವೇದಿಕೆಯ ಮೂಲಕ ಮಾತನಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ವೇದಿಕೆಯ ಮಾತುಗಳು ಸಭಾಮರ್ಯಾದೆಯ ಪರಿಧಿಯೊಳಗೆ ಪ್ರಸ್ತುತಗೊಳ್ಳಬೇಕಾದ ಅನಿವಾರ್ಯತೆಗಳಿವೆ. ಈ ವ್ಯತ್ಯಾಸಗಳನ್ನು ಅರಿತು ನಮ್ಮನ್ನು ನಾವು ರೂಪಿಸಿಕೊಳ್ಳುವುದಕ್ಕೆ ಸರಿಯಾದ ಅವಕಾಶಗಳು ಪ್ರಾಪ್ತವಾಗಬೇಕು. ಕಾಲೇಜು ಜೀವನ ಎಂಬುದು ವಿದ್ಯಾರ್ಥಿಗಳಿಗೆ ಅನೇಕ ಅನುಭವಗಳನ್ನು ಕಟ್ಟಿಕೊಡುವಲ್ಲಿ ವಿವಿಧ ವೇದಿಕೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ ಎಂದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಾನಾ ಬಗೆಯ ಸ್ಪರ್ಧೆಗಳನ್ನು ಆಯೋಜಿಸುವುದು ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಿಯೇ ಬೆಳೆದು ಬಂದಿದೆ. ಹಾಗಾಗಿ ಎಲ್ಲರಿಗೂ ಅವರವರ ಪ್ರತಿಭೆಯ ಅನಾವರಣಕ್ಕೆ ಅವಕಾಶ ದೊರಕುವಂತಹ ವೇದಿಕೆಯನ್ನು ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕಲ್ಪಿಸಿಕೊಟ್ಟಿದೆ ಎಂದರು.
ವಿದ್ಯಾರ್ಥಿನಿ ಅಪರ್ಣಾ ಭಕ್ತಿಗೀತೆ ಹಾಡಿದರು. ವಿದ್ಯಾರ್ಥಿ ಆದಿತ್ಯ ಸುಬ್ರಹ್ಮಣ್ಯ ಕವನ ವಾಚಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಹಾಗೂ ತಂಡದವರು ರಸಪ್ರಶ್ನೆ ಆಯೋಜಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳಿಸಿದರು. ವಿದ್ಯಾರ್ಥಿನಿ ತೃಪ್ತಿ ಹಾಗೂ ಶ್ರಾವ್ಯಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರೂಪಿಸಿದರು.