ಧನಾತ್ಮಕವಾಗಿ ಚಿಂತಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ | ಪಿನ್ಯಾಕಲ್‌ ಐಟಿ ಕ್ಲಬ್‌ನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ವಂ.ಡಾ.ಆಂಟೋನಿ ಪ್ರಕಾಶ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗವು ನಡೆಸುತ್ತಿರುವ ಪಿನ್ಯಾಕಲ್‌ ಐಟಿ ಕ್ಲಬ್‌ನ ವತಿಯಿಂದ 2023-24ನೇ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲ್ಪಡುವ ಕಾರ್ಯಕ್ರಮಗಳಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಚಾಲನೆ ನೀಡಲಾಯಿತು.

ಕಾಲೇಜಿನ ಪ್ರಾಚಾರ್ಯ ವಂ. ಡಾ. ಆಂಟೊನಿ ಪ್ರಕಾಶ್‌ ಮೊಂತೆರೋ ದೀಪ ಬೆಳಗಿಸಿ ಉದ್ಘಾಟಿಸಿ, ಇಂದಿನ ಡಿಜಿಟಲ್‌ ಯುಗದಲ್ಲಿ ಯುವಜನರು ಬೇಗನೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದರಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಮಾನಸಿಕ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ಮನಸ್ಸಿನಲ್ಲಿ ಋಣಾತ್ಮಕ ಭಾವನೆಗಳನ್ನು ಬೆಳೆಸದೆ ಧನಾತ್ಮಕವಾಗಿ ಚಿಂತಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪಿನ್ಯಾಕಲ್‌ ಐಟಿ ಕ್ಲಬ್‌ನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ನಾಯಕತ್ವ ಗುಣ, ಕ್ರಿಯಾಶೀಲತೆ ಹೆಚ್ಚುವುದು ನಿಸ್ಸಂಶಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ. ಸ್ಟ್ಯಾನಿ ಪಿಂಟೋ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚುವ ಒಂದು ಪುಟ್ಟ ಮಾಹಿತಿಯು ಕ್ಷಣಮಾತ್ರದಲ್ಲಿ ವೈರಲ್‌ ಆಗಬಹುದು. ಆದ್ದರಿಂದ ನಾವು ಆದಷ್ಟು ಜಾಗರೂಕರಾಗಿರಬೇಕು. ಪಿನ್ಯಾಕಲ್‌ ಐಟಿ ಕ್ಲಬ್‌ನ ಮುಖಾಂತರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರಲಿ ಎಂದರು.



































 
 

ರೊವೀನಾ ಮತ್ತು ಬಳಗ ಪ್ರಾರ್ಥಿಸಿದರು. ಪಿನ್ಯಾಕಲ್‌ ಐಟಿಕ್ಲಬ್‌ ನ ಅಧ್ಯಕ್ಷ ಅಭಿಷೇಕ್ ಕಾಮತ್‌ ಸ್ವಾಗತಿಸಿದರು. ಪಿನ್ಯಾಕಲ್‌ ಐಟಿ ಕ್ಲಬ್‌ನ ಸಂಯೋಜಕಿ ರಾಜೇಶ್ವರಿ ಎಂ. ಅವರು ಐಟಿ ಕ್ಲಬ್‌ ಮುಖಾಂತರ ಆಯೋಜಿಸಲ್ಪಡುವ ಸಂಭಾವ್ಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಐಟಿ ಕ್ಲಬ್‌ ಉಪಾಧ್ಯಕ್ಷ ಆದಿತ್ಯ ದಿನೇಶ್‌ ವಂದಿಸಿದರು. ಗಣಕ  ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ, ಪಿನ್ಯಾಕಲ್‌ ಐಟಿ ಕ್ಲಬ್‌ನ ಕಾರ್ಯದರ್ಶಿ ಫರ್ವೇಜ್‌ ಅಕ್ತರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ಗಣಕ ವಿಜ್ಞಾನ ವಿಭಾಗದ ವತಿಯಿಂದ ನಡೆಸಿದ ಪ್ರವೇಶ ಮಟ್ಟದ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top