ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 22ರ ಶುಕ್ರವಾರ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೆ.ಎಸ್. ವೆಂಕಟ್ರಮಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವರದಿ ವರ್ಷದಲ್ಲಿ 53.28 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭಾಂಶವನ್ನು ಬೈಲಾ ರೀತಿಯಲ್ಲಿ ವಿಲೇವಾರಿ ಮಾಡಲು ಮಹಾಸಭೆಗೆ ಶಿಫಾರಸ್ಸು ಮಾಡಲಾಗಿದೆ. ಸಂಘದಲ್ಲಿ 3282 ಎ ತರಗತಿ ಸದಸ್ಯರಿದ್ದಾರೆ ಎಂದರು.
ವರದಿ ವರ್ಷದ ಅಂತ್ಯಕ್ಕೆ 2.1 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಒಟ್ಟು 2.09 ಕೋಟಿ ರೂ. ನಿಧಿಗಳಿದ್ದು, ಅವುಗಳನ್ನು ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ, ಸದಸ್ಯರಿಗೆ ಸಾಲ ನೀಡಲು ಇನ್ನಿತರ ವ್ಯವಹಾರಗಳಿಗೆ ತೊಡಗಿಸಲಾಗಿದೆ. ವರದಿ ವರ್ಷದ ಅಂತ್ಯದಲ್ಲಿ 18.48 ಕೋಟಿ ರೂ. ಠೇವಣಿ ಇದೆ ಎಂದು ತಿಳಿಸಿದರು.
ಮುಂದಿನ ಆರ್ಥಿಕ ಚುಟವಟಿಕೆಗಳಿಗೆ ಬಂಡವಾಳ ಕ್ರೋಢೀಕರಣ ಅಗತ್ಯವಿದ್ದು, ಅದರಂತೆ 25 ಲಕ್ಷ ರೂ. ಹೆಚ್ಚುವರಿ ಪಾಲುಬಂಡವಾಳ ಸಂಗ್ರಹಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿಗೆ 2.5 ಕೋಟಿ ರೂ. ಹೆಚ್ಚುವರಿ ಠೇವಣಿ ಸಂಗ್ರಹ ಗುರಿ ಹೊಂದಲಾಗಿದೆ. ಸಂಘದ ಕಾರ್ಯಕ್ಷೇತ್ರದಲ್ಲಿ 113 ನವೋದಯ ಸ್ವಸಹಾಯ ಗುಂಪುಗಳ ರಚನೆಯಾಗಿದ್ದು, ಈ ವರ್ಷ ಹೊಸತಾಗಿ ಐದು ಹೊಸ ಗುಂಪು ರಚಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 110 ಗುಂಪುಗಳಿಗೆ 87.23 ಲಕ್ಷ ರೂ. ಸಾಲ ನೀಡಲಾಗಿದ್ದು, 20 ಲಕ್ಷ ರೂ. ಹೆಚ್ಚುವರಿ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪೆರ್ಲಂಪಾಡಿಯಲ್ಲಿರುವ ಕೇಂದ್ರ ಕಚೇರಿ ಮೇಲ್ಭಾಗದಲ್ಲಿ ಸಭಾಂಗಣವನ್ನು ನಿರ್ಮಿಸುವುದು, ಕೇಂದ್ರ ಕಚೇರಿ ಮತ್ತು ಪಾಲ್ತಾಡಿ ಶಾಖೆಯ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಸುವುದು, ಕೇಂದ್ರ ಕಚೇರಿ ಮುಂಭಾಗದಲ್ಲಿ ಆವರಣ ಗೋಡೆ ವಿಸ್ತರಣೆ, ಹೊಸ ಸಿಮೆಂಟ್ ಮೋರಿ ಅಳವಡಿಸುವುದು. ಸದಸ್ಯರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಶೆಡ್ ರಚನೆಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.