ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಕರ್ನಾಟಕದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ.
ಕಾವೇರಿ ಜಲಾನಯನ ಪ್ರದೇಶಗಳ ರೈತರು ಮತ್ತು ಜನರಿಗೆ ಕುಡಿಯಲು, ವ್ಯವಸಾಯಕ್ಕೆ ನೀರು ಇಲ್ಲದಿರುವಾಗ ಬೆಂಗಳೂರಿಗೆ ಕಾವೇರಿ ನೀರನ್ನು ಕೆಲ ದಿನಗಳವರೆಗೆ ಸರಬರಾಜು ಮಾಡುವುದು ಬೇಡ ಎಂದು ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ.
ರೈತ ಹಿತರಕ್ಷಣಾ ಸಮಿತಿಯು ನಾಳೆ ಶನಿವಾರ ಮಂಡ್ಯ ಬಂದ್‌ಗೆ ಕರೆ ನೀಡಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಪ್ರಮುಖ ಜಂಕ್ಷನ್‌ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ: ಮಂಡ್ಯ, ಮೈಸೂರು ಭಾಗಗಳಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲು ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್ಹೌಸ್ಗೆ ಕನ್ನಡಪರ ಸಂಘಟನೆಗಳ ಮುತ್ತಿಗೆ ಹಾಕಲಿದ್ದು, ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಲಿದ್ದಾರೆ.