ಪುತ್ತೂರು: ಸೇತುವೆ ನಿರ್ಮಾಣದ ಸಂದರ್ಭ ಸ್ಥಗಿತಗೊಂಡಿದ್ದ ಬಸ್ ಸಂಪರ್ಕವನ್ನು ಮತ್ತೆ ಆರಂಭಿಸುವಂತೆ ಆಗ್ರಹಿಸಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ರೈ, ಪುತ್ತೂರು – ರೆಂಜ ನಡುವೆ ಮೊದಲು ಬಸ್ ಓಡಾಟವಿತ್ತು. ಸೇತುವೆ ನಿರ್ಮಾಣ ಕಾಮಗಾರಿಗಾಗಿ ಬಸ್ ಸಂಚಾರವನ್ನು ಮೊಟುಕುಗೊಳಿಸಲಾಗಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸಂಪರ್ಕ ರಸ್ತೆ ಸುಸ್ಥಿತಿಗೆ ಬಂದಿದೆ. ಆದರೂ ಬಸ್ ಸಂಪರ್ಕವನ್ನು ಮರುಕಲ್ಪಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಕಷ್ಟಪಡುವಂತಾಗಿದೆ ಎಂದು ದೂರಿದರು.
ವಿದ್ಯಾರ್ಥಿಗಳ ಬವಣೆಯನ್ನು ಕೆ.ಎಸ್.ಆರ್.ಟಿ.ಸಿ. ಅರ್ಥ ಮಾಡಿಕೊಳ್ಳಬೇಕು. ವಿದ್ಯಾಭ್ಯಾಸಕ್ಕಾಗಿ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಾಗಿ ಒಡಾಟ ನಡೆಸುತ್ತಿದ್ದಾರೆ. ಆದ್ದರಿಂದ ಮೊದಲಿನಂತೆಯೇ, ಬೆಳಿಗ್ಗೆ 8 ಗಂಟೆಗೆ ಸುಳ್ಯಪದವಿನಿಂದ ರೆಂಜ ಮಾರ್ಗವಾಗಿ ಪುತ್ತೂರಿಗೆ ಹೊರಡುವ ಬಸ್ ಹಾಗೂ ಸಂಜೆ 4.15ಕ್ಕೆ ಪುತ್ತೂರಿನಿಂದ ಸುಳ್ಯಪದವಿಗೆ ಸಂಚಾರ ನಡೆಸುತ್ತಿದ್ದ ಬಸ್ ಅನ್ನು ಮತ್ತೊಮ್ಮೆ ಮರುಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಿಂಚನಾ, ಕಾರ್ಯದರ್ಶಿ ಹರಿಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು.