ಮಂಗಳೂರು: ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಸೌಜನ್ಯಾಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ.
ನಿನ್ನೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರನ್ನು ದಿಢೀರ್ ಭೇಟಿ ಮಾಡಿದ ಕುಸುಮಾವತಿ ಅವರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಾಕ್ಷ್ಯಗಳನ್ನು ನಾಶ ಮಾಡಿದ ಪೊಲೀಸರು ಮತ್ತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಮರು ತನಿಖೆಗೆ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದ್ದಾರೆ.
ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ಮರು ತನಿಖೆಗೊಳಪಡಿಸಬೇಕು. ನೈಜ ಆರೋಪಿಗಳ ಪತ್ತೆಗೆ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿ ನೈಜ ಆರೋಪಿಗಳು ತಪ್ಪಿಸಿಕೊಳ್ಳಲು ಮೊದಲು ತನಿಖೆ ಮಾಡಿದ ಪೊಲೀಸರು ಮತ್ತು ವೈದ್ಯರು ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಗಳ ಹೆಸರು ಉಲ್ಲೇಖಿಸಿ ಹಿಂದೆಯೇ ದೂರು ನೀಡಿದ್ದರೂ ಅದನ್ನು ಪರಿಗಣಿಸಿಲ್ಲ. ಸಾಕಷ್ಟು ಸೌಲಭ್ಯಗಳು ಇಲ್ಲದಿದ್ದ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವುದು ಸರಿಯಲ್ಲ. ಇಲ್ಲೂ ಸಾಕ್ಷ್ಯ ನಾಶ ಮಾಡಲು ಪ್ರಭಾವಿಗಳು ಒತ್ತಡ ಹೇರಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಸೌಜನ್ಯಾ ಮೈಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಕಚ್ಚಿದ ಗಾಯಗಳಿದ್ದರೂ ವೈದ್ಯರು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ವಿಚಾರವನ್ನು ನಮೂದಿಸಿಲ್ಲ. ಗುಪ್ತಾಂಗದ ದ್ರವದ ವಿಧಿವಿಜ್ಞಾನ ಪರೀಕ್ಷೆ ನಡೆಯದಂತೆ ವೈದ್ಯರೇ ಮಾಡಿದ್ದಾರೆ ಎಂದು ಕುಸುಮಾವತಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ.
ಈಗ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕಿರುಕುಳ ನೀಡಲಾಗುತ್ತಿದೆ. ಸುಳ್ಳು ಹಲ್ಲೆ ದೂರು ದಾಖಲಿಸಲಾಗಿದೆ. ಹೋರಾಟದ ಮುಂಚೂಣಿಯಲ್ಲಿರುವವರ ತೇಜೋವಧೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜತೆ ಮಾತನಾಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.