ಪುತ್ತೂರು: ಅ.10ರಂದು ನಡೆಯುವ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.
ಸಭೆ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಶಿವರಾಮ ಕಾರಂತ ಬಾಲವನ ಹಾಗೂ ಸಹಾಯಕ ಆಯುಕ್ತರ ಕಚೇರಿ ವತಿಯಿಂದ ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ನಡೆಯುವ ಡಾ| ಶಿವರಾಮ ಕಾರಂತರ ಜನ್ಮ ದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿ ಬೆಳಗ್ಗಿನ ಅವಧಿಯಲ್ಲೇ ನಡೆಯಲಿದೆ. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿ ಸಮಿತಿಗೆ ಸಲಹೆ ನೀಡುವಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭ ಹಿಂದೆ ಸಂಜೆ ನಡೆಯುತ್ತಿತ್ತು. ಈ ಬಾರಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಅವರು ಮಾಹಿತಿ ನೀಡಿದರು.
ಪ್ರಶಸ್ತಿಗೆ ಆಯ್ಕೆ ಕುರಿತು ಸಮಿತಿ ತೀರ್ಮಾನಕ್ಕೆ ಸಲಹೆ ಇದ್ದರೆ ತಿಳಿಸುವಂತೆ ಸಭೆಗೆ ತಿಳಿಸಿದರು. ಈ ಹಿಂದೆ ಸಾಹಿತ್ಯ, ರಂಗಭೂಮಿ, ವಿಜ್ಞಾನ, ಪರಿಸರ, ಕಲಾ ವಿಭಾಗಕ್ಕೆ ಸಂಬಂಧಿಸಿ ಪ್ರಶಸ್ತಿ ನೀಡಲಾಗುತ್ತಿತ್ತು ಎಂದು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಮುದ್ರಣ ವಿಭಾಗಕ್ಕೆ ಸಂಬಂಧಿಸಿಯೂ ಆಯ್ಕೆ ಮಾಡಬಹುದು ಎಂದು ವಿವಿಧ ಸಲಹೆ ಸೂಚನೆಗಳು ಸಭೆಯಲ್ಲಿ ಕೇಳಿ ಬಂತು. ಕಾರ್ಯಕ್ರಮದಲ್ಲಿ ಡಾ. ಕಾರಂತ ಸಂಸ್ಮರಣಾ ಉಪನ್ಯಾಸ ನೀಡಲು ಸಾಹಿತಿ ಡಾ.ವಸಂತ ಕುಮಾರ್ ತಾಳ್ತಜೆ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಲಾಯಿತು. ಡಾ. ಎಚ್.ಜಿ. ಶ್ರೀಧರ್ ಅವರು ಮಾತನಾಡಿ, ಡಾ.ಶಿವರಾಮ ಕಾರಂತರ ಸಹವರ್ತಿಯಾಗಿದ್ದ ಪಡಾರು ಮಹಾಬಲ ಭಟ್ ಅವರನ್ನು ಈ ಕಾರ್ಯಕ್ರಮದಲ್ಲಿ ಗುರುತಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಡಾ. ಅಮೃತ ಮಲ್ಲ ಮಾತನಾಡಿ, ಈ ಬಾರಿ ಕಾರಂತರು ಮಾಡಿದ ಪತ್ರಿಕೋದ್ಯಮ ಅಥವಾ ಮುದ್ರಣ ಮಾದ್ಯಮದ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್, ಸಾಹಿತಿ ಡಾ| ವರದರಾಜ್ ಚಂದ್ರಗಿರಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಡಾ| ಎಚ್.ಜಿ. ಶ್ರೀಧರ್, ಡಾ| ರಾಜೇಶ್ ಬೆಜ್ಜಂಗಳ, ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಅಮೃತ ಮಲ್ಲ, ನಗರಸಭೆ ನಿಕಟಪೂರ್ವ ಉಪಾದ್ಯಕ್ಷೆ ವಿದ್ಯಾ ಆರ್. ಗೌರಿ, ಸಿ.ಆರ್.ಪಿ. ಶಶಿಕಲಾ, ಬಿ.ಆರ್.ಪಿ. ರತ್ನ ಕುಮಾರಿ, ಸಿಡಿಪಿಒ ಶ್ರೀಲತಾ ಉಪಸ್ಥಿತರಿದ್ದರು.
ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿ, ಸಂಯೋಜಕ ರಮೇಶ್ ಉಳಯ ವಂದಿಸಿದರು. ಬಾಲವನದ ಅಶೋಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.