ನವದೆಹಲಿ: ಕೇಂದ್ರ ಸರ್ಕಾರವು ಹೊಸ ಸಂಸತ್ ಭವನದ ಮೊದಲ ವಿಶೇಷ ಅಧಿವೇಶನದ ಕಲಾಪದ ವೇಳೆ, ನಿರೀಕ್ಷೆಯಂತೆ ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸಿದೆ. ಈ ವಿಧೇಯಕಕ್ಕೆ ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲು ಕಲ್ಪಿಸುವ ವಿಧೇಯಕವು 27 ವರ್ಷಗಳಿಂದ ನನೆಗುದಿಗೆಗೆ ಬಿದ್ದಿತ್ತು. ಇದೀಗ ಈ ವಿಧೇಯಕವನ್ನು ಮಂಡಿಸಲಾಗಿದ್ದು, ಬಹುತೇಕ ಒಪ್ಪಿಗೆ ದೊರೆಯುವುದು ಪಕ್ಕಾ ಆಗಿದೆ. ಒಂದೊಮ್ಮೆ ಈ ವಿಧೇಯಕವು ಕಾಯ್ದೆಯಾಗಿ ಬದಲಾದರೂ, ಅದರ ಜಾರಿಗೆ 2029ರವರೆಗೂ ಕಾಯಬೇಕಾಗುತ್ತದೆ. ಈ ವಿಧೇಯಕದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1/3 ಲೋಕಸಭೆ ಸೀಟು ಮಹಿಳೆಯರಿಗೆ ಮೀಸಲು
ಸಂಸತ್ತಿನ ಕೆಳಮನೆಯಾಗಿರುವ ಲೋಕಸಭೆಯಲ್ಲಿ ಈ ವಿಧೇಯಕ ಮೂಲಕ ಮಹಿಳೆಯರಿಗೆ 1/3ರಷ್ಟು ಸೀಟು ಮೀಸಲು ದೊರೆಯಲಿದೆ. ತಿದ್ದುಪಡಿಯ ಪ್ರಕಾರ, ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ. ಈ ಕ್ರಮವು ರಾಷ್ಟ್ರೀಯ ಶಾಸಕಾಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಪ್ರಯತ್ನವಾಗಿದೆ ಎಂದು ಹೇಳಬಹುದು.
ದಿಲ್ಲಿ ಅಸೆಂಬ್ಲಿಗೂ ಅನ್ವಯ
ವಿಧೇಯಕವು ತನ್ನ ನಿಬಂಧನೆಗಳನ್ನು ದಿಲ್ಲಿ ಶಾಸಕಾಂಗ ಸಭೆಗೆ ಅನ್ವಯಿಸುತ್ತದೆ. ದಿಲ್ಲಿ ಅಸೆಂಬ್ಲಿಯಲ್ಲಿ ಮೂರನೇ ಒಂದು ಭಾಗಗಳ ಸೀಟು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುತ್ತದೆ. ಅಲ್ಲದೇ, ದೆಹಲಿ ಅಸೆಂಬ್ಲಿಯಲ್ಲಿ ನೇರ ಚುನಾವಣೆಯ ಮೂಲಕ ಭರ್ತಿಯಾಗುವ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ ಎನ್ನುತ್ತದೆ ವಿಧೇಯಕ.
ಎಲ್ಲ ರಾಜ್ಯ ವಿಧಾನಸಭೆಗಳಲ್ಲೂ ಮೀಸಲು
ಲೋಕಸಭೆ ಮತ್ತು ದಿಲ್ಲಿ ಅಸೆಂಬ್ಲಿಗೆ ಅನ್ವಯವಾಗುವ ರೀತಿಯಲ್ಲೇ ದೇಶದ ಎಲ್ಲ ರಾಜ್ಯ ವಿಧಾನಸಭೆಗಳಿಗೂ ಈ ಮಹಿಳಾ ಮೀಸಲು ವಿಧೇಯಕವು ಅನ್ವಯವಾಗಲಿದೆ. ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿ ನಿಬಂಧನೆಗಳಂತೆಯೇ, ಅನ್ವಯವಾಗುವ ಷರತ್ತಿನ ಅಡಿಯಲ್ಲಿ ಮೀಸಲಾದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲು ಇರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿವೆ.
ಕ್ಷೇತ್ರ ಮರುವಿಂಗಡಣೆ ಬಳಿಕ ಅನ್ವಯ, 2029ರವರೆಗೆ ಕಾಯಬೇಕು
ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲು ಕಲ್ಪಿಸುವ ಈ ವಿಧೇಯಕವು, ಕ್ಷೇತ್ರಗಳ ಮರು ವಿಂಗಡಣೆಯ ಬಳಿಕ ಅನ್ವಯವಾಗಲಿದೆ. ಅಂದರೆ, ಸದ್ಯಕ್ಕೆ ವಿಧೇಯಕವು ಕಾಯ್ದೆಯಾಗಿ ಬದಲಾದರೂ, ಜಾರಿಗೆ ಸಾಕಷ್ಟು ಸಮಯವಿದೆ. ಇದಕ್ಕೂ ಮೊದಲು ಜನಗಣತಿಯನ್ನು ಕೈಗೊಳ್ಳಬೇಕು. ಅದಾದ ಮೇಲೆ, ಮಹಿಳಾ ಮೀಸಲು ಜಾರಿಗೆ ಬರಲಿದೆ. ಅಂದರೆ, ಮಹಿಳಾ ಮೀಸಲು ಜಾರಿಗೆ ಮಹಿಳೆಯರು 2029ರವರೆಗೂ ಕಾಯಬೇಕಾಗಬಹುದು.
ಮಹಿಳಾ ಮೀಸಲಿನಲ್ಲಿ ರೊಟೇಷನ್
ಸಂಸತ್ತು ನಿರ್ಧಾರದಂತೆ ಕ್ಷೇತ್ರ ಮರು ವಿಂಗಡಣೆಯ ಬಳಿಕವೇ ಲೋಕಸಭೆ, ದಿಲ್ಲಿ ವಿಧಾನಸಭೆ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಈ ಮಹಿಳಾ ಮೀಸಲಿನಲ್ಲಿ ರೊಟೇಷನ್ ಪದ್ಧತಿ ಇರಲಿದೆ. ನಿಗದಿತ ಸಮಯದ ಬಳಿಕ ರೊಟೇಷನ್ ಬದಲಾಗಲಿದೆ.