ಪುತ್ತೂರು: ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ತೆರೆದ ವಾಹನದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಬೊಳುವಾರಿನಿಂದ ಮೆರವಣಿಗೆಯಲ್ಲಿ ತರಲಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಿರ್ಮಿಸಿದ ಬೃಹತ್ ಪೆಂಡಾಲ್ ನಲ್ಲಿ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಗೌರವಾಧ್ಯಕ್ಷ ಎಂ.ಕೆ. ಪ್ರಸಾದ್, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಉಪಾಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಸಹಜ್ ರೈ ಬಳೆಜ್ಜ, ರವೀಂದ್ರ ಶೆಟ್ಟಿ ನುಳಿಯಾಲು, ಸುಧೀರ್ ಶೆಟ್ಟಿ ತೆಂಕಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಜತೆ ಕಾರ್ಯದರ್ಶಿ ನೀಲಂತ್ ಕುಮಾರ್, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಶೋಭಾಯಾತ್ರೆ ಖ್ಯಾತಿಯ ಗಣೇಶ :
ಶೋಭಾಯಮಾನವಾದ ಶೋಭಾಯಾತ್ರೆಗೆ ಈ ಗಣೇಶ ಹೆಸರುವಾಸಿಯಾಗಿದ್ದು, ಶೋಭಾಯಾತ್ರೆಯಂದು ಶ್ರೀ ಗಣೇಶನ ಸಂಗಡ ಪೌರಾಣಿಕ ಹಿನ್ನೆಲೆಯುಳ್ಳ ವಿವಿಧ ಟ್ಯಾಬ್ಲೋಗಳು ವಿವಿಧ ವಾಹನಗಳಲ್ಲಿ ರಾತ್ರಿಯಿಡೀ ಸಂಚರಿಸಲಿದೆ. ಇದು ಕೇವಲ ತಾಲೂಕು ಅಲ್ಲದೆ ಹೊರ ಜಿಲ್ಲೆಗಳಿಂದ ಬರುವ ವೀಕ್ಷಕರನ್ನು ಆಕರ್ಷಿಸುತ್ತದೆ. ಪ್ರತೀ ವರ್ಷ 10ರಿಂದ 15 ಟ್ಯಾಬ್ಲೋಗಳು ಶೋಭಾಯಾತ್ರೆಯಂದು ಜನಮನ ಸೂರೆಗೊಳ್ಳಲಿರುವುದು ಈ ಗಣೇಶನ ವಿಶೇಷತೆಯಾಗಿದೆ.