ಪುತ್ತೂರು: ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಹೆಮ್ಮೆ ಮತ್ತು ಸುಯೋಗ ಎಂದು ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಪ್ರತೀಕ್ಷಾ ಹೆಚ್. ಹೇಳಿದರು.
ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಆಯುಷ್ ಶಾಖೆಯಾದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ವಿವಿಧ ರೋಗಗಳಿಗೆ ಔಷಧ ಹಾಗೂ ಶಸ್ತ್ರಚಿಕಿತ್ಸೆ ರಹಿತ ಪರಿಹಾರವನ್ನು ಕಂಡುಕೊಳ್ಳಬಹುದಾದ ಅನೇಕ ವೈಶಿಷ್ಟ್ಯಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಪ್ರಾಣಾಯಾಮ ಹಾಗೂ ಧ್ಯಾನಗಳ ಪರಿಣಾಮಕಾರಿ ಅಭ್ಯಾಸದಿಂದ ನಮ್ಮ ದೇಹ ಹಾಗೂ ಮನಸ್ಸು ಸ್ವಸ್ಥವಾಗಿರಲು ಸಾಧ್ಯ ಎಂಬುದನ್ನು ಪ್ರಾಯೋಗಿಕ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು..
ಸ್ಥಳೀಯರಾದ ರಾಮಚಂದ್ರ ಭಟ್ ಬಟ್ಯಡ್ಕ , ವಿದ್ಯಾ ಹೆಚ್, ಶಾಲಾ ಸ್ಥಳದಾನಿ ಮಹಾಬಲ ಭಟ್ ನಡುಮನೆ, ಎಸ್.ಡಿ.ಎಂ.ಸಿ. ಸದಸ್ಯ ವಿಷ್ಣು ಕನ್ನಡಗುಳಿ ಭಾಗವಹಿಸಿದ್ದರು. ಮುಖ್ಯಶಿಕ್ಷಕಿ ಲತಾ ಯು. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.