ಮೋದಿ, ಬೊಮ್ಮಾಯಿ ಮತ್ತಿತರ ಗಣ್ಯರಿಂದ ಸಂತಾಪ
ವಿಜಯಪುರ: ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ರಾತ್ರಿ ಲಿಂಗೈಕ್ಯರಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಾಂಡಿತ್ಯಪೂರ್ಣ ತತ್ವಜ್ಞಾನಿಯ ಅಂತಿಮ ದರ್ಶನ ಪಡೆದುಕೊಳ್ಳಲು ಸಾಗರೋಪಾದಿಯಲ್ಲಿ ಜನತೆ ಬರುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸ್ರೀಗಳ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಸಂಜೆ 5 ಗಂಟೆಯ ನಂತರ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರು, ಶಾಸಕರು ಹಾಗು ಅಪಾರ ಭಕ್ತ ಸಮೂಹ ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಶ್ರೀಗಳ ಅಗಲಿಕೆಯ ಗೌರವಾರ್ಥ ವಿಜಯಪುರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಜಿಲ್ಲಾಡಳಿತವು ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಿದೆ. ಮಧ್ಯಾಹ್ನ 3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಭಕ್ತರಿಗೆ ಪ್ರಸಾದ, ನೀರು, ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ರಿಂದ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. ಅಂತಿಮ ಕ್ರಿಯೆಯನ್ನು ಸಂಜೆ 5ಕ್ಕೆ ಆಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುತ್ತದೆ.
82 ವರ್ಷದ ಪಾಂಡಿತ್ಯಪೂರ್ಣ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಳೆದ ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಗೆ ಸೇರಲಿಚ್ಚಿಸದ ಅವರಿಗೆ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ವೈಕುಂಠ ಏಕಾದಶಿಯ ಪುಣ್ಯದಿನದಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.