ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ಶನಿವಾರ ಅಮಾಯಕ ವೃದ್ಧ ಬಲಿಯಾಗಿದ್ದರು. ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಪುತ್ರ ಸೈಯದ್ ಐವನ್‌ನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ ಮಗನಿಗೆ ಕುಮ್ಮಕ್ಕು ನೀಡಿದ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
ಮಗ ಮಾಡಿದ ತಪ್ಪಿಗೆ ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವ್ಹೀಲಿಂಗ್ ಮಾಡಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಯದ್‌ನನ್ನು ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ಹಸುಗಳನ್ನು ಮೇಯಿಸಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ, ಸೈಯದ್ ವ್ಹೀಲಿಂಗ್ ಮಾಡಿಕೊಂಡು ಬಂದು ವೃದ್ಧ ಗುರುಸ್ವಾಮಿಗೆ ಡಿಕ್ಕಿ ಹೊಡೆದಿದ್ದ. ಗುರುಸ್ವಾಮಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಈ ವೇಳೆ ಗಾಯಗೊಂಡ ಸೈಯದ್‌ನನ್ನು ವೃದ್ಧನ ಕುಟುಂಬಸ್ಥರೇ ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ವೇಳೆ ತಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದರು.
ತನ್ನನ್ನು ವರ್ಗಾವಣೆ ಮಾಡಿದ ಇಲಾಖೆಯ ವಿರುದ್ಧವೇ ಯಾಸ್ಮಿನ್ ತಾಜ್ ಕಿಡಿಕಾರಿದರು. ʻʻThis is what I get from my lovely department hats off” ಎಂದು ವರ್ಗಾವಣೆ ಆದೇಶಕ್ಕೆ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಶವ ಸ್ವೀಕರಿಸಿದೆ ಕುಟುಂಬಸ್ಥರ ಪ್ರತಿಭಟನೆ
ಗುರುಸ್ವಾಮಿ ಮೃತದೇಹವನ್ನು ಸ್ವೀಕರಿಸದೇ ಕೆ.ಆರ್.ಆಸ್ಪತ್ರೆಯ ಶವಾಗಾರದ ಮುಂದೆ ಹಿಮ್ಮಾವು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗಲ್ಲ. ಪಿಎಸ್ಐ ಯಾಸ್ಮಿನ್ ತಾಜ್‌ರನ್ನೂ ಅಮಾನತ್ತು ಮಾಡಿ, ಮಗ ಯಾಸ್ಮಿತ್ ತಾಜ್‌ನನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು.
ಅಪ್ರಾಪ್ತನಿಗೆ ಬೈಕ್ ಕೊಡಿಸಿರುವ ಪೋಷಕರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು. ಇದಕ್ಕೆ ಉತ್ತರ ನೀಡಲಾಗದೆ ಡಿವೈಎಸ್‌ಪಿ. ಮೌನಕ್ಕೆ ಜಾರಿದರು. ಬಳಿಕ ಘಟನೆ ಸಂಭವಿಸಿದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ನೀವು ಕೊಟ್ಟ ದೂರಿನ ಅನುಸಾರ ಎಫ್‌ಐಆರ್ ದಾಖಲಿಸಿದ್ದೇವೆ. ಯುವಕನ ಮೇಲೆ ಸಿದ್ದಾರ್ಥನಗರ, ನಂಜನಗೂಡು ಸಂಚಾರ ಠಾಣೆಯಲ್ಲಿ ಎಫ್‌ಐಆರ್ ಆಗಿದೆ. ಎರಡೂ ಕೇಸ್‌ನಲ್ಲಿ ಕ್ರಮ ತೆಗೆದುಕೊಂಡು, ಆರೋಪಿಯನ್ನು ಬಂಧಿಸಿದ್ದೇವೆ. ಯಾಸ್ಮಿನ್ ತಾಜ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಿಂದೆಯೂ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದ
ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಂಜನಗೂಡು ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಪುತ್ರ ಸೈಯದ್ ಐಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ವಿಧಿಸಿದ್ದರು. ಇಷ್ಟಾದರೂ ಬುದ್ಧ ಕಲಿಯದ ಸೈಯದ್ ಮತ್ತೆ ವ್ಹೀಲಿಂಗ್ ಮಾಡಲು ರಸ್ತೆಗಿಳಿದಿದ್ದ. ಇದೀಗ ಈತನ ಹುಚ್ಚಾಟಕ್ಕೆ ವೃದ್ಧ ಬಲಿಯಾಗಿದ್ದಾರೆ.