ಚಂಡೀಗಢ: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್ ವೇಳೆ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನೌಕ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ಹುತಾತ್ಮರಾಗಿದ್ದಾರೆ. ಅವರ ಹುಟ್ಟೂರುಗಳಲ್ಲಿ ಸರ್ಕಾರಿ ಗೌರವ ಹಾಗೂ ಸಾವಿರಾರು ಜನರ ಕಣ್ಣೀರಿನ ಮಧ್ಯೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅದರಲ್ಲೂ, ಪಂಜಾಬ್‌ನ ಮಲ್ಲನ್‌ಪುರ ಗರೀಬ್‌ದಾಸ್‌ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಅಂತ್ಯಸಂಸ್ಕಾರದ ವೇಳೆ ಅವರ 6 ವರ್ಷದ ಮಗನು ತಂದೆಗೆ ಕೊನೆಯ ಬಾರಿ ಸೆಲ್ಯೂಟ್ ಮಾಡಿರುವ ಭಾವನಾತ್ಮಕ ಕ್ಷಣಗಳ ವಿಡಿಯೊ ವೈರಲ್ ಆಗಿದೆ.
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪಾರ್ಥಿವ ಶರೀರವು ಮಲ್ಲನ್‌ಪುರ ಗರೀಬ್‌ದಾಸ್‌ಗೆ ಆಗಮಿಸುತ್ತಲೇ ಯೋಧನ ಪತ್ನಿ, ಕುಟುಂಬಸ್ಥರು ಸೇರಿ ಇಡೀ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಳುತ್ತ ಕುಳಿತ ತಾಯಿ, ಆಕೆಯ ತೊಡೆಯ ಮೇಲೆ ಮಲಗಿರುವ 2 ವರ್ಷದ ಮಗಳು, ಅಳುತ್ತ 6 ವರ್ಷದ ಮಗ ನಿಂತಿರುವ ದೃಶ್ಯಗಳು ಮನಕಲಕುವಂತಿದ್ದವು. ಅದರಲ್ಲೂ, ಸೇನೆಯ ಬಟ್ಟೆ ತೊಟ್ಟು, ಅಪ್ಪನ ಶವದ ಎದುರು ಸೆಲ್ಯೂಟ್ ಹೊಡೆದ ದೃಶ್ಯವಂತೂ ಕರುಳು ಕಿವುಚುವಂತಿತ್ತು.
ಅನಂತನಾಗ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 12-13ರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನೌಕ್ ಹಾಗೂ ಡಿವೈಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಮೂವರು ಹುತಾತ್ಮರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸಾವಿರಾರು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಭಾರತ್ ಮಾತಾ ಕೀ ಜೈ ಸೇರಿ ಹಲವು ಘೋಷಣೆಗಳನ್ನು ಕೂಗಿ ಗೌರವ ನಮನ ಸಲ್ಲಿಸಿದ್ದಾರೆ. ಈಗಲೂ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ.
ಎನ್‌ಕೌಂಟರ್‌ಗೂ ಮುನ್ನ ಮಗನ ಜತೆ ಮಾತು
19 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನಪ್ರೀತ್ ಸಿಂಗ್ ಅವರು, ಉಗ್ರರ ಗುಂಡಿಗೆ ಎದೆಯೊಡ್ಡುವ ಕೆಲವೇ ಗಂಟೆಗೆ ಮುಂಚೆ ಅವರು ತಮ್ಮ 6 ವರ್ಷದ ಮಗ ಹಾಗೂ 2 ವರ್ಷದ ಮಗಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದರು.
2021ರಲ್ಲಿ ಶೌರ್ಯ ಸೇನಾ ಪದಕ ಪುರಸ್ಕೃತ ಸಿಖ್ ಲೈಟ್ ಪದಾತಿ ದಳದ ಕಮಾಂಡರ್ ಕರ್ನಲ್ ಸಿಂಗ್ ಅವರು ಹುತಾತ್ಮರಾಗುವ ಮೊದಲು ಅದೇ ದಿನ ಚಂಡೀಗಢದಲ್ಲಿರುವ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. “ನಾವು ಕೊನೆಯದಾಗಿ ಬೆಳಗ್ಗೆ 6:45ಕ್ಕೆ ಅವರೊಂದಿಗೆ ಮಾತನಾಡಿದ್ದೆವು. ಅವರು ಒಳ್ಳೆಯ ವ್ಯಕ್ತಿ. ಕಳೆದ ವರ್ಷ, ಅವರ ಕರ್ತವ್ಯಕ್ಕಾಗಿ ಅವರಿಗೆ ಸೇನಾ ಪದಕವನ್ನು ನೀಡಲಾಗಿತ್ತು. ದೇಶಕ್ಕಾಗಿ ಪ್ರಾಣ ನೀಡಿರುವ ಅವರಿಗೆ ತಲೆಬಾಗುತ್ತೇನೆ,” ಕರ್ನಲ್ ಮನಪ್ರೀತ್ ಸಿಂಗ್ ಅವರ ಸೋದರ ಮಾವ ವೀರೇಂದ್ರ ಗಿಲ್ ಕಣ್ಣಂಚಿನಲ್ಲಿ ಜಿನುಗುತ್ತಿದ್ದ ನೀರನ್ನು ತಡೆಯುತ್ತ ಹೇಳಿದರು.