ಪುತ್ತೂರು: ಋಷಿ ಮುನಿಗಳ ಸಾವಿರಾರು ವರ್ಷಗಳ ತಪಸ್ಸಿನ ಫಲವೇ ಹಿಂದೂ ಧರ್ಮ. ಇಂತಹ ಧರ್ಮವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯಬೇಕಾದರೆ, ಮಕ್ಕಳಲ್ಲಿ ಸಂಸ್ಕಾರವನ್ನು ಕಲಿಸಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.ಮುಂಡೂರು ಉದಯಗಿರಿ ಅಜಲಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಹಿರಿಯರಿಗೆ ಗೌರವ ನೀಡುವಂತಹ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ದೈವಸ್ಥಾನ, ದೇವಸ್ಥಾನ, ಮಂದಿರಗಳಲ್ಲಿ ಇಂತಹ ಸಂಸ್ಕಾರವನ್ನು ಕಲಿಸಿಕೊಟ್ಟಾಗ, ಧರ್ಮ ರಕ್ಷಣೆಯ ಜಾಗೃತಿ, ದೇವರ ಮೇಲಿನ ಭಕ್ತಿ ಮಕ್ಕಳಲ್ಲಿ ಮೂಡುತ್ತದೆ ಎಂದರು.
90 ದಿನದಲ್ಲಿ ದೈವಸ್ಥಾನದ ಕಾರ್ಯ ಸಂಜೀವ ಮಠಂದೂರು: ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೇವಲ 90 ದಿನದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ನಮ್ಮ ಯುವಕರು ಮಾಡಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಜೀರ್ಣೋದ್ಧಾರಕ್ಕೆ ನಡೆಸಿದ ತಯಾರಿ, ಪರಿಶ್ರಮ ದೈವಸ್ಥಾನದ ಒಟ್ಟು ಕೆಲಸವನ್ನು ನೋಡಿದಾಗ ತಿಳಿಯುತ್ತದೆ. ನಮ್ಮ ಯುವಕರ ಇಂತಹ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ, ಪರಂಪರೆ ಉಳಿಯುವ ಕೆಲಸ ಮಾಡಬಹುದು. ಮುಂದೆಯೂ ಯುವಕರು ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಬೇಕು ಎಂದು ಹೇಳಿದರು.
ಧರ್ಮ ಶಿಕ್ಷಣದ ಅರಿವು: ಕೇಶವ ಪ್ರಸಾದ್ ಮುಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ದೈವಸ್ಥಾನ, ದೇವಸ್ಥಾನದ ಕೆಲಸ ಮಾಡುವುದರಿಂದ ಧರ್ಮ ಉಳಿಯುವ ಕೆಲಸ ಆಗುತ್ತದೆ. ಧಾರ್ಮಿಕ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ, ಶಿಕ್ಷಣ ನೀಡಿದಾಗ ಮಕ್ಕಳಿಗೆ ಧರ್ಮದ ಅರಿವು ಮೂಡಲು ಸಾಧ್ಯ ಎಂದ ಅವರು, ಕಣ್ಣಿಗೆ ಕಾಣದ ಗಾಳಿ ಹೇಗೋ, ಅದೇ ರೀತಿ ದೇವರು ನಮಗೆ ಸದಾ ಅನುಗ್ರಹ ನೀಡುತ್ತಿರುತ್ತಾರೆ ಎಂದರು.
ಒತ್ತೆಕೋಲ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್ಯ ಹಿಂದಾರು ಅಧ್ಯಕ್ಷತೆ ವಹಿಸಿದ್ದರು. ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಳ, ಶ್ರೀ ಕ್ಷೆ. ಧ. ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಆನಂದ್ ಪುತ್ತೂರು, ಡಾ. ಸುರೇಶ್ ಪುತ್ತೂರಾಯ, ಸಾಜಾ ರಾಧಾಕೃಷ್ಣ ಅಳ್ವಾ ಉಪಸ್ಥಿತರಿದ್ದರು.