ಬೆಂಗಳೂರು: ಚೈತ್ರಾ ಕುಂದಾಪುರ ಗ್ಯಾಂಗಿನ ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಸಿಸಿಬಿ ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಸಂಸ್ಥಾನದ ಹಾಲಿ ಸ್ವಾಮೀಜಿಗಳಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಅವರು ನಿರೀಕ್ಷಣಾ ಜಾಮೀನು ಕೋರಿ 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಲ ಶ್ರೀಗಳು ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ಬೆನ್ನಲ್ಲೇ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ. ಅವರನ್ನು ಹುಡುಕುವ ಪ್ರಯತ್ನವನ್ನು ಸಿಸಿಬಿ ನಡೆಸಿದೆ ಎನ್ನಲಾಗಿದ್ದು, ಆದರೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಗುರುವಾರ ಸಿಸಿಬಿ ಪೊಲೀಸರು ಹಿರೇಹಡಗಲಿಯಲ್ಲಿರುವ ಮಠಕ್ಕೆ ಹೋಗಿ ನೋಟಿಸ್ ಅಂಟಿಸಿ ಬಂದಿದ್ದಾರೆ.ಒಂದು ವೇಳೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿದರೆ ಅರೆಸ್ಟ್ ಆಗುವ ಭೀತಿಯಲ್ಲಿ ಹಾಲಶ್ರೀ ಸ್ವಾಮೀಜಿಗಳು ಬಂಧನದಿಂದ ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ನಡೆಸಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಸ್ವಾಮೀಜಿ ಅಲ್ಲಿಂದಲೇ ತಮ್ಮ ಆಪ್ತರಾದ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 16ರಂದು ಅರ್ಜಿ ವಿಚಾರಣೆ:ನಗರದ 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 16ರಂದು ನಡೆಯಲಿದ್ದು, ಈ ವೇಳೆ ಕೋರ್ಟ್ ಜಾಮೀನು ನೀಡುತ್ತದಾ ಎಂದು ಕಾದು ನೋಡಬೇಕು. ಇದೊಂದು ಹೈಪ್ರೊಫೈಲ್ ಪ್ರಕರಣ ಮತ್ತು ಇದರಲ್ಲಿ ಈಗಾಗಲೇ ಹಲವರನ್ನು ಬಂಧಿಸಿರುವುದರಿಂದ ನಿರೀಕ್ಷಣಾ ಜಾಮೀನು ಕೊಡುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.
ಒಂದು ವೇಳೆ ಜಾಮೀನು ಸಿಗದೆ ಹೋದರೆ ಸಿಸಿಬಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಈ ನಡುವೆ ಕೋರ್ಟ್ ಕೆಲವು ದಿನಗಳ ಮಟ್ಟಿಗೆ ಬಂಧನಕ್ಕೆ ತಡೆಯಾಜ್ಞೆ ನೀಡಿ, ಸಿಸಿಬಿಯಿಂದ ಅಫಿಡವಿಟ್ ಕೇಳುವ ಸಾಧ್ಯತೆಯೂ ಇದೆ.ಒಂದೊಮ್ಮೆ ಜಾಮೀನು ಕೊಡದೆ ಹೋದರೆ ಸ್ವಾಮೀಜಿಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ. ಆದರೆ, ಅದರ ನಡುವೆ ಸಿಸಿಬಿ ಬಂಧಿಸಿದರೆ ಅದು ಸಾಧ್ಯವಾಗುವುದಿಲ್ಲ. ಹಾಗೆ ಮಾಡುವುದಿದ್ದರೆ ಅವರು ಅಜ್ಞಾತ ಸ್ಥಳದಿಂದಲೇ ಇದನ್ನೆಲ್ಲ ಮಾಡಬೇಕಾಗುತ್ತದೆ. ಅದಕ್ಕೆ ಮೊದಲು ಸಿಸಿಬಿ ಪೊಲೀಸರು ಅಜ್ಞಾತ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸುವ ಸಾಧ್ಯತೆಯೂ ಕಂಡುಬಂದಿದೆ.