ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಗಣೇಶೋತ್ಸವ ವಿವಾದ ಸುಖಾಂತ್ಯ ಕಂಡಿದೆ.
ವಿವಿಯ ಮಂಗಳ ಸಭಾಂಗಣದಲ್ಲಿ ಈ ಬಾರಿಯ ಗಣೇಶ ಚತುರ್ಥಿಯನ್ನು ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಕುಲಪತಿಗಳಾದ ಪ್ರೊ. ಜಯರಾಜ್ ಅಮಿನ್ ಹೇಳಿಕೆ ನೀಡಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ಪುರುಷರ ಹಾಸ್ಟೆಲ್ನಲ್ಲಿ ಗಣೇಶೋತ್ಸವವವನ್ನು ಆಚರಣೆ ಮಾಡಲಾಗುತ್ತಿತ್ತು.
ಈ ಬಾರಿ ಮಂಗಳಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಲು ಯೋಜನೆ ರೂಪಿಸಿದಾಗ ಇದಕ್ಕೆ ವಿರೋಧ ವ್ಯಕ್ತವಾಗಿ ಅವಕಾಶ ನೀಡಲ್ಲ ಎಂದು ಕುಲಪತಿಗಳು ಹೇಳಿದ್ದರು.
ಇದು ತೀವ್ರ ಆಕ್ರೋಶಕ್ಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಧ್ಯ ಪ್ರವೇಶಿಸಿ ಕುಲಪತಿಗಳನ್ನು ಭೇಟಿ ಮಾಡಿ ಮಂಗಳ ಸಭಾಂಗಣದಲ್ಲೇ ಮಾಡಬೇಕು ಮತ್ತು ಇದರ ಖರ್ಚು ವೆಚ್ಚ ವಿವಿ ಆಡಳಿತ ನೀಡಬೇಕೆಂದು ಒತ್ತಾಯ ಮಾಡಿದ್ದರು. ಈ ಬಗ್ಗೆ ಕುಲಪತಿಗಳು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಸೂಚನೆ ನೀಡುವಂತೆ ಕೋರಿದ್ದರು. ಬಳಿಕ ವಿವಾದ ದಿನ ಕಳೆದಂತೆ ಭುಗಿಲೆದ್ದು ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿತ್ತು.
ಸ್ಥಳೀಯ ಶಾಸಕ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಗಣೇಶೋತ್ಸವ ಮಾಡುವ ಬಗ್ಗೆ ವಿವಿ ಕುಲಪತಿಗಳೆ ನಿರ್ಧಾರ ಕೈಗೊಳ್ಳಲಿ ಹೊರಗಿನವರ ಅಗತ್ಯವಿಲ್ಲವೆಂದಿದ್ದರು. ಇದಕ್ಕೆ ಪ್ರತಿಯಾಗಿ ಅಸೈಗೋಳಿಯಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಗಣೇಶ ಚತುರ್ಥಿಯನ್ನು ಮಂಗಳ ಸಭಾಂಗಣದಲ್ಲಿ ನಡೆಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮಾಡಿಯೇ ಸಿದ್ದ ಸಾಧ್ಯವಿದ್ದರೆ ತಡೆಯಲಿ ಎಂದು ಸವಾಲು ಹಾಕಿದ್ದರು.
ಈ ಎಲ್ಲಾ ಗೊಂದಲಗಳಿಂದ ಸರ್ಕಾರಕ್ಕೆ ಮುಜುಗರ ಆಗುವ ಮತ್ತು ಕರಾವಳಿಯಲ್ಲಿ ಕೋಮುಭಾವನೆ ಕೆರಳಿ ಕಾನೂನು ಸುವ್ಯವಸ್ಥೆ ಹದಗಡುವ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸಿದ್ದರಿಂದ ಕುಲಪತಿಗಳಾದ ಪ್ರೊ. ಜಯರಾಜ್ ಅಮೀನ್ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಆಚರಿಸಲು ಅನುಮತಿ ನೀಡಿದ್ದಾರೆ.