ಪುತ್ತೂರು: ಕಹಿ ಅನುಭವಗಳನ್ನು ಮರೆತು, ಸಿಹಿ ಅನುಭವಗಳನ್ನು ಮೆಲುಕು ಹಾಕುತ್ತಾ ಸಾಗುವುದೇ ಜೀವನ. ಅಂತಹ ಸಿಹಿ-ಕಹಿ ಅನುಭವಗಳ ಸಮ್ಮಿಲನವೇ ಎನ್.ಎಸ್.ಎಸ್‌ನ ವಾರ್ಷಿಕ ವಿಶೇಷ ಶಿಬಿರ ಎಂದು ನ್ಯಾಯವಾದಿ ಅಶೋಕ್ ಅರಿಗ ಬಾರಿಕೆ ಹೇಳಿದರು.
ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಿಂದ ಗ್ರಾಮ ಜಾಗೃತಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವುದರ ಜೊತೆಗೆ ಗ್ರಾಮದ ಜನರಲ್ಲಿ ಅರಿವು ಮತ್ತು ವಾಸ್ತವ ಪ್ರಜ್ಞೆ ಮೂಡಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ.ಎಂ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ವಿದ್ಯಾರ್ಥಿಗಳಿಗೆ ಬದುಕಿನ ಅನುಭವ ನೀಡುವ ಚಟುವಟಿಕೆಯಾಗಿದೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯವು ನಿರಂತರವಾಗಿ ಇಂತಹ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಕಳೆದ 35 ವರ್ಷಗಳಲ್ಲಿ ನಿರತವಾಗಿದೆ ಎಂದರು.
ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ನಿವೃತ್ತ ಶಿಕ್ಷಕಿ ಲಕ್ಷ್ಮೀ ಆರ್. ರೈ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ವಕೀಲ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಕುಮಾರನಾಥ್, ಕೋಡಿಂಬಾಡಿ ಶಾಲಾ ಮುಖ್ಯಶಿಕ್ಷಕಿ ಬಾಲಕೃಷ್ಣ ಎನ್., ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ್ ಪೂಜಾರಿ, ಸುರೇಶ್ ಶೆಟ್ಟಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಏಳು ದಿನಗಳ ಕಾಲ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಎನ್.ಎಸ್.ಎಸ್. ಘಟಕ ಸಂಯೋಜಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವರದಿ ವಾಚಿಸಿ ವಂದಿಸಿದರು. ಎನ್.ಎಸ್.ಎಸ್. ಘಟಕದ ನಾಯಕ ಕೌಶಿಕ್ ಜೆ. ಸ್ವಾಗತಿಸಿ, ಎನ್.ಎಸ್.ಎಸ್. ಸ್ವಯಂಸೇವಕ ನವನೀತ್ ಡಿ.ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ವೃಂದ, ಕೋಡಿಂಬಾಡಿ ಶಾಲೆಯ ಶಿಕ್ಷಕರ ವೃಂದ, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು.