ಬೆಂಗಳೂರು: ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ತಬಸ್ಸುಮ್ ಜಹೇರಾ ಹಾಗೂ ಬೆಳ್ಳಾವಿ ಉಪ ತಹಸೀಲ್ದಾರ್ ಶಬ್ಬೀರ್ ಅಹಮದ್ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ.
ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಲಂಚ ಕೇಳಿದ ಹಾಗೂ ಸ್ವೀಕರಿಸಿದ ಪ್ರಕರಣದಲ್ಲಿ ತಬಸ್ಸುಮ್ ಜಹೇರಾ ಹಾಗೂ ಶಬ್ಬೀರ್ ಅಹಮದ್ ಅವರನ್ನು ದೋಷಿ ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದೆ. ಇಬ್ಬರಿಗೂ 4 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ.
ಏನಿದು ಪ್ರಕರಣ?
ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿಯೋರ್ವರು ತಮ್ಮ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದರು. ತನ್ನ ತಂದೆಯ ಹೆಸರಿನ ಜಮೀನು ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾಯಿಸಿ ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅವರು ಅಧಿಕೃತ ಕೃಪೆ ತೋರಲು 35,000 ರೂ.ಲಂಚ ಕೇಳಿದ್ದರು.
ಲಂಚ ಕೊಟ್ಟರೂ ಅವರನ್ನು ದಿನದಿಂದ ದಿನಕ್ಕೆ ಸತಾಯಿಸುತ್ತಿರುವುದರಿಂದ ಬೇಸತ್ತ ಜಯರಾಮ್ ಆಕ್ರೋಶಗೊಂಡಿದ್ದರು. ಈ ನಡುವೆ ಶಬ್ಬೀರ್ ಇನ್ನಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಭೆಯೊಂದರಲ್ಲಿ ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಮಾಡಿದ್ದರು. 2017ರ ಮೇ 23ರಂದು ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ವಿಚಾರಣೆ ನಡೆಸಿ, ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದರು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.