ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಪುತ್ತೂರು ಘಟಕದ ಉದ್ಘಾಟನಾ ಸಮಾರಂಭ ಸೆ. 17ರಂದು ಪುತ್ತೂರಿನ ಪಡೀಲ್ ಟ್ರಿನಿಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ಪುತ್ತೂರು ಘಟಕದ ಚೆಯರ್ ಮ್ಯಾನ್ ಪ್ರಮೋದ್ ಕುಮಾರ್ ಕೆ.ಕೆ. ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿಸಿಇ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ 1985ರಲ್ಲಿ ಆರಂಭಗೊಂಡಿತು. ರಾಷ್ಟ್ರವ್ಯಾಪಿ ಸುಮಾರು 44 ಸೆಂಟರ್ ಕಾರ್ಯಾಚರಿಸುತ್ತಿದ್ದು, ಪುತ್ತೂರಿನಲ್ಲಿಯೂ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಇದು ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ ತಾಲೂಕು ವ್ಯಾಪ್ತಿಯನ್ನು ಹೊಂದಿ ಕಾರ್ಯಾಚರಿಸಲಿದೆ. ಸುಮಾರು 45 ಸದಸ್ಯರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಸದಸ್ಯರು ತನ್ನ ಕೆಲಸದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲಾ ಸದಸ್ಯರಿಗೂ ಉತ್ತೇಜನ ನೀಡಿ ಉತ್ತಮ ಮನೋಭಾವದಿಂದ ಬೆಳೆಯಲು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಗುಣಮಟ್ಟದ ಕೆಲಸ ಮಾಡುವುದು ಈ ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು.
ಈ ಸಂಸ್ಥೆಗೆ ನೋಂದಾವಣೆ ಮಾಡಿಕೊಳ್ಳಲು ನಾಲ್ಕು ವಿಭಾಗಗಳಿವೆ. ಸಿವಿಲ್ ಡಿಪ್ಲೊಮಾ ಮಾಡಿರುವವರಿಗೆ ಲೈಫ್ ಸದಸ್ಯರಾಗಲು ಕನಿಷ್ಠ 10 ವರ್ಷಗಳ ಅನುಭವ, ಬಿಇ ಮಾಡಿದವರಿಗೆ 5 ವರ್ಷಗಳ ಅನುಭವವಿರಬೇಕು ಎಂದು ತಿಳಿಸಿದರು.
ಎಸಿಸಿಇ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಕೆ. ಸನಪ್ ಪದ ಸ್ವೀಕಾರ ನೆರವೇರಿಸುವರು. ಈ ಸಂದರ್ಭದಲ್ಲಿ ನೆಹರುನಗರ ಮಾಸ್ಟರ್ ಪ್ಲಾನರಿಯ ಸ್ಥಾಪಕ ಎಸ್.ಕೆ. ಆನಂದ್ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಸುರತ್ಕಲ್ ಎನ್ಐಟಿಕೆಯ ಪ್ರೊ. ಡಾ. ಕೆ.ಎಸ್. ಬಾಬು ನಾರಾಯಣ್, ಮಂಗಳೂರು ವೃತ್ತ ಲೋಕೋಪಯೋಗಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಗೋಕುಲ್ ದಾಸ್ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಎಸಿಸಿಇ ಪಶ್ಚಿಮ ವಲಯ ಉಪಾಧ್ಯಕ್ಷ ಪುನಿತ್ ದಿನೇಶ್ ಚಂದ್ರ ರೈ, ಎಸಿಸಿಇ ದಕ್ಷಿಣ ವಲಯ ಉಪಾಧ್ಯಕ್ಷ ಕಚರಿಯ ರಾಜ್ ಕುಮಾರ್, ಎಸಿಸಿಇ ಜನರಲ್ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್, ಟ್ರೆಸರರ್ ಆರ್. ಶ್ರೀನಿವಾಸನ್, ಜನರಲ್ ನಿವೃತ್ತ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಪಾಲ್ಗೊಳ್ಳಲಿದ್ದಾರೆ. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸಿಸಿಇ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಚೇತನ್ ಎಸ್., ಪುತ್ತೂರು ಘಟಕದ ಕಾರ್ಯದರ್ಶಿ ವಿನೋದ್ ಕುಮಾರ್ ಕೆ., ಉಪಾಧ್ಯಕ್ಷ ವೆಂಕಟ್ರಾಜ್ ಪಿ.ಜಿ., ಸದಸ್ಯ ಪ್ರಸನ್ನ ದರ್ಬೆ ಉಪಸ್ಥಿತರಿದ್ದರು.