ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ವೇಣೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಮನೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿದ್ದ ಬಂಟ್ವಾಳ ತಾಲೂಕಿನ ಲಕ್ಷ್ಮೀನಾರಾಯಣ ಆಚಾರ್ಯ ಎಂಬವರು ನಾಪತ್ತೆಯಾಗಿದ್ದು ಅವರ ಮೊಬೈಲ್ ವಾಲ್ಪಾಡಿಯ ಕೊಯಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿತ್ತು. ನಾಪತ್ತೆ ಕುರಿತು ಅವರ ಪತ್ನಿ ವಂದನಾ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹುಡುಕಾಟಕ್ಕಿಳಿದ ಪೊಲೀಸರು ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿತ್ತು. ಅದರೆ ಅವರ ಮೊಬೈಲ್ ರಸ್ತೆ ಬದಿ ಪತ್ತೆಯಾಗಿದ್ದು, ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಪತ್ತೆಯಾಗಿರಲಿಲ್ಲ.
ಸೆ. 8ರಂದು ಅಮ್ಟಾಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆದ ಬಳಿಕ ಅವರು ತುಂಬಾ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ. ಮಾನಸಿಕವಾಗಿ ನೊಂದುಕೊಂಡಿದ್ದರು. ಪಂಚಾಯಿತಿ ಪಿ.ಡಿ.ಒ.ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಇವರಿಗೆ ಹೆಚ್ಚವರಿಯಾಗಿ ಪಿ.ಡಿ.ಒ.ಹುದ್ದೆಯನ್ನು ನೀಡಲಾಗಿತ್ತು. ಆದರೆ ಇವರು ಎರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದೆ ನೊಂದುಕೊಂಡಿದ್ದರು ಎನ್ನಲಾಗಿದೆ.