ಉಡುಪಿ: ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಚೈತ್ರಾ ಕುಂದಾಪುರ ಅವರಿಗೆ ತಾನು ಆಶ್ರಯ ನೀಡಿಲ್ಲ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಎಲ್ಲವೂ ಸುಳ್ಳು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಹೇಳಿಕೆ ನೀಡಿದ್ದಾರೆ.
ಘಟನೆಯ ಸಂಬಂಧ ಸುರಯ್ಯಾ ಅಂಜುಮ್ ಅವರಲ್ಲಿ ಮಾಧ್ಯಮದ ಪ್ರತಿನಿಧಿಗಳು ಕರೆ ಮಾಡಿ ಮಾತನಾಡಿಸಿದಾಗ, ”ಚೈತ್ರಾ ಕುಂದಾಪುರ ಅವರಿಗೆ ನಾನು ಆಶ್ರಯ ನೀಡಿದ್ದೇನೆ. ಹಾಗಾಗಿ ನೋಟಿಸ್ ಬಂದಿದೆ ಎಂಬುದು ಸುಳ್ಳು. ಆಕೆಯನ್ನು ನಿನ್ನೆ ರಾತ್ರಿ ಉಡುಪಿಯ ಕೃಷ್ಣಮಠದ ರಾಜಾಂಗಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಒಂದು ವೇಳೆ ನನ್ನ ಬಳಿಯಲ್ಲಿದ್ದಾಗ ಬಂಧಿಸಿದ್ದರೆ ಪೊಲೀಸರು ನನ್ನನ್ನು ಕೂಡ ಬಂಧಿಸಬೇಕಿತ್ತಲ್ಲವೇ?” ಎಂದು ಮರು ಪ್ರಶ್ನಿಸಿದ್ದಾರೆ.
“ನನ್ನ ಬಗ್ಗೆ ದ್ವೇಷ ಇರುವವರು ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡುತ್ತಿದ್ದಾರೆ. ಒಂದು ವೇಳೆ ಸಿಸಿಬಿ ಪೊಲೀಸರು ಏನಾದರೂ ನೋಟಿಸ್ ಕಳುಹಿಸಿದರೆ ನಾನು ಉತ್ತರಿಸುವೆ. ನಾನು ಆಶ್ರಯ ನೀಡಿದ್ದೇನೆ ಎಂಬುದು ಸುಳ್ಳು. ಸರಿಯಾದ ಮಾಹಿತಿ ಇಲ್ಲದೆ ನನ್ನ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ಮಾನನಸ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹಾಗೂ ಕಾಂಗ್ರೆಸ್‌ನ ಸುರಯ್ಯಾ ಅಂಜುಮ್, ಉಡುಪಿಯ ಖಾಸಗಿ ಮಾಧ್ಯಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸಹೋದ್ಯೋಗಿಗಳಾಗಿದ್ದರು ಎಂದು ತಿಳಿದುಬಂದಿದೆ.