ಪುತ್ತೂರು: ಈ ಬಾರಿ ಗಣೇಶ ಚೌತಿಗೆ ಸರ್ಕಾರಿ ರಜೆ ಇಲ್ಲ! ಬದಲಾಗಿ ಒಂದು ದಿನದ ಮೊದಲು ಆಚರಿಸುವ ಗೌರಿ ಹಬ್ಬಕ್ಕಷ್ಟೇ ಸರ್ಕಾರಿ ರಜೆ ನೀಡಲಾಗಿದೆ.
ಸೆ. 19ರಂದು ದೇಶಾದ್ಯಂತ ಗಣೇಶ ಚೌತಿ ಆಚರಣೆ ವಿಜೃಂಭಣೆಯಿಂದ ನಡೆಯಲಿದೆ. ಆದರೆ ಸರ್ಕಾರಿ ಕ್ಯಾಲೆಂಡರಿನಲ್ಲಿ ಚೌತಿಯನ್ನು ಸೆ. 18ರಂದು ಎಂದು ನಮೂದಿಸಲಾಗಿದೆ. ಹಾಗಾಗಿ ಸರ್ಕಾರಿ ರಜೆ ಘೋಷಿಸುವಲ್ಲಿ ಎಡವಟ್ಟಾಗಿದೆ.
ರಾಜ್ಯ ಸರ್ಕಾರ ಪ್ರಕಟಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ. 18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದಿದೆ. ಪಂಚಾಂಗ ಪ್ರಕಾರ ಸೆ. 18ರಂದು ಗೌರಿ ತದಿಗೆ. ಹಾಗಾಗಿ ಸರ್ಕಾರದ ರಜೆ ಇದೀಗ ಗೊಂದಲಕ್ಕೆ ಎಡೆ ನೀಡಿದೆ.
ಗಣೇಶ ಚೌತಿಯಂದು ಮನೆ, ಅಂಗಡಿ ಹಾಗೂ ಸಾರ್ವಜನಿಕವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ಆ ದಿನದಂದೇ ರಜೆ ನೀಡುವಂತೆ ಶಾಲಾ – ಕಾಲೇಜುಗಳಿಗೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ. ಆದರೆ ಸಾರ್ವತ್ರಿಕ ರಜೆ ಘೋಷಣೆ ಸರ್ಕಾರವೇ ಮಾಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.