ಪುತ್ತೂರು: ರಾಷ್ಟ್ರೀಯ ವಿಚಾರಧಾರೆಗಳಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹಿಂದುಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಲಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ. ನವೀನ್ ಹೇಳಿದರು.
ಪುತ್ತೂರು ಅಮರ ಜವಾನ್ ಸ್ಮಾರಕದ ಬಳಿ ಬುಧವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೃಷಿ ಹಾಗೂ ಕೃಷಿ ಕ್ಷೇತ್ರಕ್ಕೆ 1.50 ಲಕ್ಷ ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ನೀಡಿದೆ. ಇಂತಹ ಕೊಡುಗೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಎಲ್ಲಾ ರೀತಿಯಲ್ಲೂ ರೈತರನ್ನು ವಿರೋಧಿಸುವ ಕಾರ್ಯವನ್ನೇ ಮಾಡುತ್ತಿದ್ದು, ಬರವನ್ನು ನಿಭಾಯಿಸುವ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ ಎಂದು ಕುಟುಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು, ರೈತ ವಿರೋಧಿ ನೀತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ 312 ತಾಲೂಕುಗಳಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 170 ರೈತರ ಆತ್ಮಹತ್ಯೆ: ಸಂಜೀವ ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜ್ಯದ ಸುಮಾರು 190 ತಾಲೂಕುಗಳು ಬರಪೀಡಿತವಾಗಿದೆ. ಬರ ಪೀಡಿತ ಪ್ರದೇಶಗಳ ಅಧ್ಯಯನವನ್ನು ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಹೊರ ಬರುತ್ತಿಲ್ಲ. ತನ್ನ ಹುದ್ದೆಯ ನಾಲ್ಕು ಕಾಲುಗಳು ಯಾವಾಗ ಅಲುಗಾಡುತ್ತದೋ ಎಂದು ತಿಳಿಯದೆ, ಮುಖ್ಯಮಂತ್ರಿಗಳು ಕುರ್ಚಿ ಬಿಟ್ಟು ಏಳುತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ದಿನಕ್ಕೆ ಇಬ್ಬರಂತೆ 170 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಗಂಭೀರ ವಿಚಾರವನ್ನು ಸರ್ಕಾರ ಗಣನೆಗೇ ತೆಗೆದುಕೊಂಡಿರದೇ ಇರುವುದು ವಿಪರ್ಯಾಸ. ವಿದ್ಯುತ್ ಖರೀದಿಯಿಂದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಾರಂಭವಾಗಿದೆ. ರೈತರ ಕೃಷಿ ಸಾಲಗಳ ಬಗ್ಗೆ ಮಾಡಿದ ಘೋಷಣೆ ಇನ್ನೂ ಜಾರಿಯಾಗಿಲ್ಲ. ಕರ್ನಾಟಕ ಜನರನ್ನು ಕತ್ತಲೆಯಲ್ಲಿ ಹಾಕಿದ ಕಾಂಗ್ರೆಸ್ ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಜನರಿಗೂ ಈಗ ಮನವರಿಕೆ ಆಗುತ್ತಿದೆ – ಕಾಂಗ್ರೆಸ್ ಅಂದರೆ ಬರ, ಬಿಜೆಪಿ ಅಂದರೆ ಸಮೃದ್ಧಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಪಿ.ಜಿ. ಜಗನ್ನಿವಾಸ ರಾವ್, ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ. ನಾರಾಯಣ, ಮಹೇಶ್ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
ಉಷಾ ಮುಳಿಯ ಪ್ರಾರ್ಥಿಸಿದರು. ರೈತ ಮೂರ್ಚಾ ಅಧ್ಯಕ್ಷ ಸುರೇಶ್ ಕಣ್ಣಾರಾಯ ಸ್ವಾಗತಿಸಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.