ಪುತ್ತೂರು: ಇದೇ ಮೊದಲ ಬಾರಿಗೆ ಸರ್ಕಾರಿ ಕಾಲೇಜಿನಲ್ಲಿ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಬಾಲ್ಬ್ಯಾಡ್ಮಿಂಟನ್ ಪಂದ್ಯ ಜ. 13ರಿಂದ 17ರವರೆಗೆ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಶಾಸಕರೂ ಆಗಿರುವ ಸಂಜೀವ ಮಠಂದೂರು ಹೇಳಿದರು.
ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಸುಮಾರು 84 ತಂಡಗಳು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿವೆ. ಒಟ್ಟು ಸುಮಾರು 100 ತಂಡಗಳು, 1000 ಕ್ರೀಡಾಪಟುಗಳು, 200 ಮಂದಿ ತೀರ್ಪುಗಾರರು, 300 ಮಂದಿ ಅಧಿಕಾರಿಗಳನ್ನೊಳಗೊಂಡಂತೆ ದೇಶದಾದ್ಯಂತದಿಂದ ಒಟ್ಟು ಸುಮಾರು 1500 ಮಂದಿ ಭಾಗವಹಿಸಲಿದ್ದಾರೆ. ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ವಾಸ್ತವ್ಯ, ಅಭ್ಯಾಸ, ಊಟೋಪಚಾರ ಸಹಿತ ಸಕಲ ಆತಿಥ್ಯಕ್ಕೆ ವ್ಯವಸ್ಥೆಯನ್ನು ಯೋಜಿಸಲಾಗಿದೆ ಎಂದರು.ಈಗಾಗಲೇ ಕ್ರೀಡಾಕೂಟಕ್ಕಾಗಿ ನಿರ್ಮಾಣವಾಗುತ್ತಿರುವ ವಿಶಾಲವಾದ ಕ್ರೀಡಾಂಗಣದಲ್ಲಿ ಎಲ್ಲಾ ಬಗೆಯ ಕ್ರೀಡೆಗಳಿಗೆ ಅವಕಾಶ ಒದಗಿಸಿದಂತಾಗುತ್ತದೆ. ಮಾತ್ರವಲ್ಲ, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಈ ಭಾಗದಲ್ಲೂ ಯುವ ಪತ್ರಿಭೆಗಳು ಮೂಡಿ ಬರಲು ಈ ಕ್ರೀಡಾಕೂಟ ಪ್ರೇರಣೆಯಾಗಲಿದೆ. ಅದಕ್ಕಾಗಿಯೇ ಈ ಕ್ರೀಡಾಕೂಟವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಕ್ರೀಡಾಂಗಣ ನಿರ್ಮಾಣ:
ಕಾಲೇಜು ಆವರಣದಿಂದ ನೇತ್ರಾವತಿ ದಡದವರೆಗೆ ವಿಶಾಲ ಕ್ರೀಡಾಂಗಣ ನಿರ್ಮಾಣ ಕಾರ್ಯ ನಡೆಯಲಿದೆ. ಇದಕ್ಕಾಗಿ ಕಳೆದ 2 ತಿಂಗಳಿನಿಂದ ಕೆಲಸಗಳು ನಡೆಯುತ್ತಿದ್ದು, ಶೇ. 90ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಯೋಜನೆಯಂತೆ, 400 ಮೀಟರ್ ಟ್ರಾಕ್ ನಿರ್ಮಿಸಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಸ್ವಾಗತ ಸಮಿತಿ ಸದಸ್ಯ ಸುನಿಲ್ ದಡ್ಡು ಉಪಸ್ಥಿತರಿದ್ದರು.