ಬೆಂಗಳೂರು: ಬಾರ್‌ನಲ್ಲಿ ಅವಾಜ್ ಹಾಕಿದ್ದಕ್ಕಾಗಿ ಯುವಕರನ್ನು ಕೆಲ ಪುಂಡರು ಅಟ್ಟಾಡಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ರೋಹಿತ್ ಗೌಡ ಎಂಬಾತನ ಮೇಲೆ ಕಾಮಾಕ್ಷಿಪಾಳ್ಯದ ರಾಜು ಮತ್ತು ತಂಡದವರು ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ವಾರ ರೋಹಿತ್ ಬಾರ್‌ವೊಂದರಲ್ಲಿ ಇದ್ದಾಗ ರಾಜು, ಧನುಷ್, ಗುರುಪ್ರಸಾದ್‌ಗೆ ಅವಾಜ್ ಹಾಕಿ ಹೋಗಿದ್ದ. ಇದರಿಂದ ಈ ಮೂವರು ಮನಸ್ಸಿನಲ್ಲೆ ದ್ವೇಷ ಕಾರುತ್ತಿದ್ದರು. ರೋಹಿತ್‌ನನ್ನು ಹೀಗೆ ಬಿಟ್ಟರೇ ನಮ್ಮನ್ನೇ ಮುಗಿಬಿಡುತ್ತಾನೆ ಎಂದುಕೊಂಡು ಆತನ ಹತ್ಯೆಗೆ ಸ್ಕೆಚ್ ಹಾಕಿದ್ದರು.
ಸೆ. 9ರ ಮಧ್ಯಾಹ್ನದಂದು ಕಾಮಾಕ್ಷಿಪಾಳ್ಯ ರಸ್ತೆಯಲ್ಲಿ ರಕ್ತದೋಕುಳಿ ಹರಿಸಿದ್ದಾರೆ. ಸ್ನೇಹಿತರ ಜತೆ ಬರುತ್ತಿದ್ದ ರೋಹಿತ್‌ನನ್ನು ಕಂಡೊಡನೆ ಸ್ಕೂಟರ್‌ನಿಂದ ಇಳಿದ ರಾಜು, ಧನುಷ್, ಗುರುಪ್ರಸಾದ್ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆಯೇ ಅಟ್ಯಾಕ್ ಮಾಡಿ ಮನಬಂದಂತೆ ಲಾಂಗ್ ಬೀಸಿದ್ದಾರೆ.
ಏರಿಯಾ ಪೂರ್ತಿ ಅಟ್ಟಾಡಿಸಿ ಮಚ್ಚು, ಲಾಂಗ್‌ನಿಂದ ಹಲ್ಲೆ ಮಾಡಿ, ಮತ್ತೆ ಬಾರ್ ಸೇರಿದ್ದಾರೆ. ಇತ್ತ ಗಾಯಾಳು ರೋಹಿತ್ ಬೆನ್ನು ಮೂಳೆ ಕಟ್ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರಿದಿದೆ. ಕಾಮಾಕ್ಷಿಪಾಳ್ಯ ಸಬ್ ಇನ್ಸ್‌ಪೆಕ್ಟರ್ ಬಿ. ರಾಣಿ ಮತ್ತು ತಂಡ ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ಹಾಗೂ ಬೈಕ್ ನಂಬರ್ ಆಧರಿಸಿ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳಾದ ರಾಜು, ಧನುಷ್, ಗುರುಪ್ರಸಾದ್ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.