ಪುತ್ತೂರು: ಗ್ರಾ.ಪಂ. ಅಧ್ಯಕ್ಷರು ಅಥವಾ ಸದಸ್ಯರಿಗೆ ತಮ್ಮ ಜವಾಬ್ದಾರಿಯ ಅರಿವಿರಬೇಕು. ಪಂಚಾಯತ್ ಕಾಯಿದೆಯ ತಿಳುವಳಿಕೆ, ಯೋಜನೆಗಳ ಮಾಹಿತಿಗಳನ್ನು ತಿಳಿದುಕೊಂಡು ಜನಸಾಮಾನ್ಯರಿಗೆ ನೀಡಬಹುದಾದ ಸೇವೆಗಳ ಜ್ಞಾನ ಹೊಂದಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲದ ವತಿಯಿಂದ ಸೋಮವಾರ ನಗರದ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಗ್ರಾಮ ಪಂಚಾಯತ್ಗಳ ಮಾಜಿ ಮತ್ತು ಹಾಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಯೋಜಿಸಲಾದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಷ್ಠೆ, ದೈಹಿಕ ಶಕ್ತಿ, ಆರ್ಥಿಕ ಬಲಾಡ್ಯತೆಯಿಂದ ರಾಜಕಾರಣ ನಡೆಯುವುದಿಲ್ಲ. ಬದಲಾಗಿ ಯೋಗದಿಂದ ನಡೆಯುತ್ತದೆ. ನಮ್ಮ ಗ್ರಾಮ ಪಂಚಾಯತನ್ನು ಶ್ರೇಷ್ಠಗೊಳಿಸುವ ಯೋಗ ನಮಗೆಲ್ಲರಿಗೂ ಸಿಕ್ಕಿದೆ. ಅದಕ್ಕೆ ಪಕ್ಷ ಶಕ್ತಿ ತುಂಬಿದೆ. ಪ್ರತಿಯೊಬ್ಬ ಅಧ್ಯಕ್ಷ -ಉಪಾಧ್ಯಕ್ಷರ ಕಷ್ಟ -ಸುಖ, ಅಭಿವೃದ್ಧಿ ಚಿಂತನೆಯಲ್ಲಿ ಪಕ್ಷ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ತುಂಬಿದರು.
ಗ್ರಾ.ಪಂ.ಗೆ ಆಯ್ಕೆಯಾದವರು ಅಧಿಕಾರ ನಡೆಸುವ ಅನುಭವ ಪಡೆದುಕೊಳ್ಳಬೇಕು. ಅತ್ಯಂತ ಹೆಚ್ಚಿನ ಅಧಿಕಾರವನ್ನು ಅಧ್ಯಕ್ಷರು ಹೊಂದಿದ್ದು, ಅವರು ಅಧಿಕಾರಿಗಳ ಬಳಿ ಹೋಗುವುದಲ್ಲ. ಅಧಿಕಾರಿಗಳು ಅಧ್ಯಕ್ಷರ ಬಳಿಗೆ ಬರಬೇಕು. ಅದಕ್ಕಾಗಿ ಪಂಚಾಯತ್ ಅಧಿಕಾರ ವ್ಯಾಪ್ತಿಗಳ ಅರಿವು ಹೊಂದಬೇಕು ಎಂದರು.
ಕೇಂದ್ರ ಸರಕಾರದ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾ.ಪಂ. ಮುಖ್ಯ ಪಾತ್ರ ವಹಿಸುತ್ತದೆ. 14, 15ರ ಹಣಕಾಸು ಯೋಜನೆಯಡಿ, ನರೇಗಾದಲ್ಲಿ ಸೇರಿದಂತೆ ಸಾಕಷ್ಟು ಅನುದಾನ ಲಭಿಸುತ್ತದೆ. ದೇಶದ ಅತಿ ದೊಡ್ಡ ಯೋಜನೆಯಾದ ಮನೆ ಮನೆಗೆ ಗಂಗಾ, ದೀನ್ ದಯಾಳ್ ಯೋಜನೆ ಮೊದಲಾದವುಗಳನ್ನು ಕೇಂದ್ರ ಸರಕಾರ ನೀಡಿದೆ. ಆದರೆ 2 ಸಾವಿರಕ್ಕೆ ಜನ ಮತ ನೀಡುತ್ತಾರೆ ಎನ್ನುವ ಪ್ರಚಾರವನ್ನು ಮಾಡಿಕೊಂಡಿದ್ದಾರೆ. ಬಿಜೆಪಿ ಸರಕಾರ 10 ಸಾವಿರ ರೂ.ವನ್ನು ನೇರವಾಗಿ ಖಾತೆಗೆ ಹಾಕಿದ್ದು, ಆಯಷ್ಮಾನ್ ಮೂಲಕ ರೂ. 5 ಲಕ್ಷ, ಉಜ್ವಲಾ ಯೋಜನೆಯಲ್ಲಿ ಗ್ಯಾಸ್ ವಿತರಣೆ ಮೊದಲಾದ ಮಹತ್ವದ ಯೋಜನೆಗಳನ್ನು ಜನರಿಗೆ ನೀಡಿದೆ ಎಂದು ಹೇಳಿದರು.
ನಾನೂ ಕುಗ್ರಾಮದಲ್ಲಿ ಹುಟ್ಟಿದವ. ಕೇವಲ ಶಿಕ್ಷಣದಿಂದ ಮಾತ್ರ ನಾನು ಬೆಳೆದಿಲ್ಲ. ಸಂಘದ ಸಂಸ್ಕಾರದೊಂದಿಗೆ ಬೆಳೆದು ಬಂದಿದ್ದೇನೆ. ನನಗೆ ಯಾವುದೇ ರಾಜಕೀಯ ಅಥವಾ ಇತರ ಹಿನ್ನಲೆ ಇರಲಿಲ್ಲ. ನಾನು ಯಾವುದೇ ಅಧಿಕಾರವನ್ನೂ ಕೇಳಿ ಪಡೆದಿಲ್ಲ ಎಂದು ಹೇಳಿದ ನಳಿನ್, ಪಕ್ಷ ನನಗೆ ಸಾಕಷ್ಟು ಅವಕಾಶ ನೀಡಿದ್ದು, ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವ ಹಕ್ಕು ನನಗಿಲ್ಲ. ಬದುಕಿರುವ ತನಕ ರಾಷ್ಟ್ರಕ್ಕಾಗಿ ಹಾಗೂ ಪಕ್ಷಕ್ಕಾಗಿ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತೇನೆ ಎಂದರು.
ಅಭಿವೃದ್ಧಿ, ಸಂಘಟನೆ ಜೊತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಸಂಜೀವ ಮಠಂದೂರು
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರಿ ಪ್ರಕೋಷ್ಠದ ರಾಜ್ಯ ಸಂಚಾಲಕ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮ ಪಂಚಾಯತ್ ಕಟ್ಟ ಕಡೆಯ ಹಾಗೂ ಮಹತ್ವದ ತೀರ್ಮಾನ ರೂಪಿಸುವ ಗ್ರಾಮ ಸರಕಾರ. ಅಭಿವೃದ್ಧಿ, ಸಂಘಟನೆಯ ಚಿಂತನೆಯೊಂದಿಗೆ ವ್ಯಕ್ತಿತ್ವ ಬೆಳೆಸಿಕೊಂಡು ನಾವು ಬೆಳೆದು ಪಕ್ಷವನ್ನೂ ಬೆಳೆಸಬೇಕು. ಆ ಮೂಲಕ ಜೀವನದ ಆಶೋತ್ತರಗಳು ಈಡೇರಿಸಬೇಕು ಎಂದರು.
ಪ್ರಶಿಕ್ಷಣ ವರ್ಗದ ಸಂಪನ್ಮೂಲ ವ್ಯಕ್ತಿಯಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು. ನಿತೀಶ್ ಕುಮಾರ್ ಶಾಂತಿವನ ಹಾಗೂ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.
ಬಿಜೆಪಿಗೆ ಸೇರ್ಪಡೆ:
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಪೆರುವಾಯಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹಾಗೂ ಅವರ ಸಹೋದರ ವಿಶ್ವನಾಥ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.