ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ರಾಮಕೃಷ್ಣ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ನ. 15ರಿಂದ 18ರತನಕ ನಡೆಯುವ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ – ಬಾಲಕಿಯರ ಕ್ರೀಡಾಕೂಟದ ಸಮಾಲೋಚನಾ ಸಭೆ ಸೆ. 11 ಸೋಮವಾರ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವ ಅವಕಾಶ ದೊರೆತಿರುವುದು ಪುತ್ತೂರಿನ ಯೋಗ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ರಾಜ್ಯಮಟ್ಟದ ಕ್ರೀಡಾಕೂಟವಾಗಿರುವುದರಿಂದ ಜವಾಬ್ದಾರಿ ಹೆಚ್ಚು ಇದೆ. ಗ್ರಾಮೀಣ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ಪೂರಕ ವ್ಯವಸ್ಥೆ ಕಲ್ಪಿಸಬೇಕು. ಈ ಕ್ರೀಡಾಕೂಟ ರಾಜ್ಯಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯ ಸಹಕಾರವೂ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ರಾಜ್ಯ ಮಟ್ಟದ ಕ್ರೀಡಾ ಕೂಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ತರಬೇತುದಾರ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಮೂರು ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಒಟ್ಟು 35 ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ವಸತಿ, ಶೌಚಾಲಯ, ಆಹಾರ, ಸಾರಿಗೆ ಸೌಲಭ್ಯಗಳ ಆಗಬೇಕಿದೆ. ಕ್ರೀಡಾಪಟುಗಳು, ಶಿಕ್ಷಕರು ಸೇರಿದಂತೆ ಒಟ್ಟು ಸುಮಾರು 3 ಸಾವಿರ ಮಂದಿಗೆ ವಸತಿ ವ್ಯವಸ್ಥೆಯಾಗಬೇಕು. ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ, ಗ್ರಾಮೀಣ ಪ್ರತಿಭೆಗಳ ಬೆಳವಣಿಗೆಗೆ ಕಾರಣೀಕರ್ತರಾದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನಿಸುವ ಯೋಜನೆಗಳಿವೆ. ನ. 15ರಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ತಾಲೂಕಿನಾದ್ಯಂತೆ ಕ್ರೀಡಾ ಸಂದೇಶ ಸಾರುತ್ತಾ ಸ್ವಾಗತ ನಡೆದು ನ. 16ರಂದು ಸಂಜೆ ಕ್ರೀಡಾ ಕೂಟದ ಉದ್ಘಾಟನೆ ನಡೆದು ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ ಎಂದು ಅವರು ಹೇಳಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಕ್ರೀಡಾಕೂಟದ ಯಶಸ್ವಿಗೆ ತನ್ನ ವೈಯಕ್ತಿಕ ಹಾಗೂ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ತಾ.ಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಮಾತನಾಡಿದರು.
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸಂತ ಫಿಲೋಮಿನಾ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮ್ಯಾಕ್ಸಿನ್ ಡಿ ಸೋಜ, ರಾಮಕೃಷ್ಣ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಗುರು ಜಯಶ್ರೀ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆ, ಭುವನೇಶ್ ಕುಮಾರ್, ತಾ.ಪಂ ಯೋಜನಾಧಿಕಾರಿ ಸುಕನ್ಯಾ, ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಲಿಲ್ಲಿ, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಸ್ವಾಗತಿಸಿ, ವಂದಿಸಿದರು. ಪುತ್ತೂರು ಹಾಗೂ ಕಡಬ ತಾಲೂಕಿನ ಶಾಲೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.