ಹೊಸದಿಲ್ಲಿ: ಸುಪ್ರೀಂ ಕೋರ್ಟ್ ವಕೀಲೆಯೋರ್ವರ ಕೊಲೆ ಆರೋಪದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ.
ನೋಯ್ಡಾ ಬಂಗಲೆಯ ಸ್ನಾನ ಗೃಹದಲ್ಲಿ 61 ವರ್ಷದ ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು.
ವಕೀಲೆಯ ಪತಿ ನಿತಿನ್ ನಾಥ್ ಸಿನ್ಹಾ ಅವರು ಬಂಗಲೆಯ ಸ್ಟೋರ್ ನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದ. ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಿ, ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಎರಡು ದಿನಗಳಿಂದ ತಾನು ಕರೆ ಮಾಡಿದರೂ ಉತ್ತರಿಸದ ಹಿನ್ನೆಲೆಯಲ್ಲಿ ವಕೀಲರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಗಲೆ ತಲುಪಿದ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಯ ಪತಿ ಕಾಣೆಯಾಗಿದ್ದರು.
ಬಂಗಲೆಯನ್ನು ಮಾರಾಟ ಮಾಡುವ ವಿಚಾರದಲ್ಲಿ ದಂಪತಿಯ ನಡುವಿನ ಭಿನ್ನಾಭಿಪ್ರಾಯವೇ ವಕೀಲರ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.