ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಲಾಗುವುದು ಎಂದು ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ಭಾಗದ ಪ್ರಮುಖರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಂದರ್ಭ ಸಭೆ ನಡೆಸಿದ ಮಹಾಸ್ವಾಮೀಜಿ ಅವರು, ಈ ತೀರ್ಮಾನ ಪ್ರಕಟಿಸಿದರು.
ಯಾವುದೇ ಕಾರಣಕ್ಕೂ ಪ್ರಕರಣವನ್ನು ಕಡೆಗಣಿಸದಂತೆ ಎಚ್ಚರ ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸರಿಯಾದ ತನಿಖೆ ನಡೆಸಬೇಕು. ಪ್ರಕರಣ ಇತ್ಯರ್ಥವಾಗುವವರೆಗೆ ಸಮಾಜದವರು ಒಗ್ಗಟ್ಟಾಗಿ ಮುಂದುವರಿಯಬೇಕು ಎಂದು ಸಭೆಗೆ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ಸೌಜನ್ಯ ಪರ ನ್ಯಾಯಾಲಯದಲ್ಲಿ ವಾದಿಸಿದ್ದ ಅಡ್ವೋಕೇಟ್ ಮೋಹಿತ್ ಅವರು, ಈ ಹಿಂದೆ ತನಿಖೆ ನಡೆಸಲಾದ ಜಡ್ಜ್ ಮೆಂಟ್ ಪ್ರತಿಯನ್ನು ಮಹಾಸ್ವಾಮೀಜಿ ಅವರಿಗೆ ನೀಡಿ ಮಾಹಿತಿ ನೀಡಿದರು.
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಒಕ್ಕಲಿಗ ಗೌಡ ಸೌಜನ್ಯ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.