ಪುತ್ತೂರು : ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸಹಸಂಸ್ಥೆ “ನ್ಯೂಸ್ ಪುತ್ತೂರು” ನೂತನ ಕಚೇರಿ ಉದ್ಘಾಟನಾ ಸಮಾರಂಭ ಸೆ.9 ಶನಿವಾರ ಪುತ್ತೂರು ನಗರದ ಏಳ್ಮುಡಿಯಲ್ಲಿ ಮುಖ್ಯರಸ್ತೆಯಲ್ಲಿರುವ “ಪ್ರಾವಿಡೆನ್ಸ್ ಪ್ಲಾಝಾ”ದ 3ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಆವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಮನದ ಪ್ರತಿಧ್ವನಿ ಎಂಬ ಧ್ಯೇಯ ವಾಕ್ಯದೊಂದಿಗೆ ನ್ಯೂಸ್ ಪುತ್ತೂರು ತಾಲೂಕಿನ ಸಮಗ್ರ ಸುದ್ದಿಯನ್ನು ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಕಳೆದ ಒಂದು ವರ್ಷದಿಂದ ಜನಮಾನಸಕ್ಕೆ ತಲುಪಿಸುವ ಮೂಲಕ ಕಾರ್ಯಾಚರಿಸುತ್ತಿದೆ ಎಂದರು.
ಸಮಾರಂಭದಲ್ಲಿ “ಪ್ರೇರಣಾ” ಸಂಸ್ಥೆ ಪ್ರವರ್ತಿತ ವಿದ್ಯಾರ್ಥಿ ವೇತನ ವಿತರಣೆಯೂ ನಡೆಯಲಿದ್ದು, ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಅಲ್ಲದೆ “ಪ್ರೇರಣಾ” ಸಂಸ್ಥೆಯಲ್ಲಿ ತರಬೇತಿ ಪಡೆದು ಸಿ.ಎ. ಫೌಂಡೇಶನ್ ನಲ್ಲಿ ತೇರ್ಗಡೆ ಹೊಂದಿರುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶನಿವಾರ ಬೆಳಿಗ್ಗೆ 10.30 ನಡೆಯುವ ಕಾರ್ಯಕ್ರಮ ಹಾಗೂ ಹವಾನಿಯಂತ್ರಿತ ಸ್ಟುಡಿಯೋವನ್ನು ಪುತ್ತೂರಿನ ಸನ್ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕಚೇರಿ ಉದ್ಘಾಟಿಸುವರು. ಪುತ್ತೂರಿನ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ “ನ್ಯೂಸ್ ಪುತ್ತೂರು” ಲಾಂಛನ ಬಿಡುಗಡೆ ಮಾಡುವರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ಸಮಾರಂಭದ ಅಧ್ಯಕ್ಷತೆ ವಹಿಸುವರು. ಪುತ್ತೂರು ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಜಯಂತ ನಡುಬೈಲು ವಿದ್ಯಾರ್ಥಿ ವೇತನ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ವೃತ್ತ ನಿರೀಕ್ಷಕ ಸುನೀಲ್ ಕುಮಾರ್, ನಗರಸಭೆ ಆಯುಕ್ತ ಮಧು ಎಸ್.ಮನೋಹರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಿದ್ದಿಕ್ ನೀರಾಜೆ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಅಧ್ಯಕ್ಷ ತಿಲಕ್ ರೈ ಕುತ್ಯಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ ನ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಚಿದಾನಂದ ಬೈಲಾಡಿ, ವೆಂಕಟೇಶ್ ಭಟ್, ವಸಂತ ಎಸ್.ವೀರಮಂಗಲ ಉಪಸ್ಥಿತರಿದ್ದರು.