ಪುತ್ತೂರು: ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಭಾಜನರಾಗಿದ್ದಾರೆ.
ಶುಭಲತಾ ಅವರು ನೊಣಯ್ಯ ಹಾಗೂ ಗುಲಾಬಿ ದಂಪತಿ ಪುತ್ರಿಯಾಗಿದ್ದು,
ಪ್ರಾಥಮಿಕ ಶಿಕ್ಷಣವನ್ನು ಮೂಡಬಿದ್ರೆಯಲ್ಲಿ, ಪ್ರೌಢ ಶಿಕ್ಷಣವನ್ನು ನಾರಾವಿ ಮತ್ತು ವೃತ್ತಿಪರ ಶಿಕ್ಷಣವನ್ನು ಮಂಗಳೂರು ಕಪಿತಾನಿಯೋ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದು, ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸೇವೆ ಸಲ್ಲಿಸಿ ಮುಂದೆ ಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು ಕಾರ್ಕಳ ತಾಲೂಕಿನ ದುರ್ಗಾ ತೆಳ್ಳಾರ್ ನಲ್ಲಿ ವೃತ್ತಿ ಜೀವನ ಆರಂಭಿಸಿ, ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡು ಹಾರಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 27 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಅವಧಿಯಲ್ಲಿ ಹಾರಾಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಉತ್ತಮ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಅಪಾರ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವನ್ನು ಗಳಿಸಿರುತ್ತಾರೆ. ತಾನು ಕಲಿಸಿದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರುವುದೇ, ಒಳ್ಳೆಯ ಪ್ರಜೆಯಾಗಿಬಾಳುವುದೇ ತನಗೆ ಸಲ್ಲುವ ಗೌರವ ಎಂದು ಭಾವಿಸಿ ಕೆಲಸ ಮಾಡಿದ್ದಾರೆ.
ಬಳಿಕ ಸುಳ್ಯ ತಾಲೂಕಿನ ಮುರೂರು ಶಾಲೆಯಲ್ಲಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಪುತ್ತೂರು ಇಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶುಭಲತಾ ಹಾರಾಡಿ ಪತಿ ಹರೀಶ್ ಹಾರಾಡಿಯವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದು, ಮಗ, ಸೊಸೆ, ಮಗಳು, ಅಳಿಯ ಇಂಜಿನಿಯರ್ ಗಳಾಗಿದ್ದು, ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.