ಬೆಳ್ತಂಗಡಿ : ವಿಕೃತಿಗಳ ಅಟ್ಟಹಾಸಕ್ಕೆ ಬಲಿಯಾದ ಕುಮಾರಿ ಸೌಜನ್ಯ ಗೌಡಳ ಸಾವಿಗೆ ಕಾರಣವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅವರನ್ನು ರಕ್ಷಿಸುತ್ತ ಬಂದ ಪ್ರಭಾವಿಗಳಿಗೆ ಕೂಡಾ ಶಿಕ್ಷೆ ವಿಧಿಸಬೇಕು ಎನ್ನುವ ಬೇಡಿಕೆಯಲ್ಲಿ ನಾಳಿನ ಸಮಾವೇಶ ನಡೆಯಲಿದೆ. ಇದು ಒಂದು ಐತಿಹಾಸಿಕ ಜನ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದು, ಕ್ಷಣಗಣನೆ ಆರಂಭಗೊಂಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಾಳೆ ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಯವರು ನ್ಯಾಯ ಪರ, ಸತ್ಯದ ಪರ, ಮತ್ತು ಧರ್ಮದ ಪರ ನಿಲ್ಲುವ ಎಲ್ಲಾ ಬಾಂಧವರನ್ನು ಆಹ್ವಾನಿಸಿದ್ದಾರೆ.
ನಾಳಿನ ಐತಿಹಾಸಿಕ ಅನ್ನಿಸುವ, ಕಂಡು ಕೇಳರಿಯದ ರೀತಿಯಲ್ಲಿ ಜನಪ್ರವಾಹ ಬರಬಹುದಾದ ಸಮಾರಂಭಕ್ಕೆ ಮೆರುಗು ನೀಡುವಂತೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾದ ಹನುಮಂತಯ್ಯ ಆಗಮಿಸಲಿದ್ದಾರೆ. ಆ ಮೂಲಕ ಸೌಜನ್ಯ ಹೋರಾಟಕ್ಕೆ ಬಹುದೊಡ್ಡ, ರಾಜ್ಯ ಮಟ್ಟದ ಬೆಂಬಲ ಸಿಕ್ಕಿದೆ. ಅಲ್ಲದೆ, ಸ್ಥಳೀಯ ಒಕ್ಕಲಿಗರ ಕಾವೂರು ಶಾಖಾ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಭೂಪತಿಗಳ ಅಟ್ಟಹಾಸಕ್ಕೆ ಬಲಿಯಾದ ಕುಮಾರಿ ಸೌಜನ್ಯ ಗೌಡಳ ಸಾವಿಗೆ ಕಾರಣವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅವರನ್ನು ರಕ್ಷಿಸುತ್ತ ಬಂದ ಪ್ರಭಾವಿಗಳಿಗೆ ಕೂಡಾ ಶಿಕ್ಷೆ ವಿಧಿಸಬೇಕು ಎನ್ನುವ ಬೇಡಿಕೆಯಲ್ಲಿ ನಾಳಿನ ಸಮಾವೇಶ ನಡೆಯಲಿದೆ.
ನಿನ್ನೆ ತಾನೇ ರಾಜ್ಯದ ಒಕ್ಕಲಿಗ ಸ್ವಾಮೀಜಿಯವರ ಸ್ಪಷ್ಟ ನಿರ್ದೇಶನದಂತೆ ಒಕ್ಕಲಿಗ ಗೌಡ ಸಂಘಟನೆಗಳ ಸ್ಥಳೀಯ ಶಾಖಾ ಮಠದ ಸ್ವಾಮೀಜಿಯವರು ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಆಗಮನದ ವಿಷಯವನ್ನು ತಿಳಿಸಿದ್ದರು. ಇದೀಗ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರ ಆಗಮನದ ಸುದ್ದಿ ಬಂದಿದೆ. ರಾಜ್ಯದ ಅತ್ಯಂತ ಪ್ರಬಲ ಸಮುದಾಯದ ನಾಯಕನ ಬೆಂಬಲದಿಂದ ಹೋರಾಟಕ್ಕೆ ಭಾರೀ ಶಕ್ತಿ ದೊರೆತಿದ್ದು, ಹೋರಾಟ ನೂರ್ಮಡಿ ಶಕ್ತಿ ಪಡೆದುಕೊಳ್ಳಲಿದೆ.
ನಾಳಿನ ಬೃಹತ್ ಪ್ರತಿಭಟನಾ ಸಭೆಗೆ ಈಗಾಗಲೇ ಈ ನಿಟ್ಟಿನಲ್ಲಿ ಸಕಲ ತಯಾರು ನಡೆದಿದೆ. ನಾಳೆಯ ಸಮಾವೇಶಕ್ಕಾಗಿ 1 ಲಕ್ಷ ಜನಕ್ಕಿಂತ ಜಾಸ್ತಿ ಜನ ಸೇರುವ ನಿರೀಕ್ಷೆಯಿದೆ. ಸ್ವ ಪ್ರೇರಿತವಾಗಿ ಜನರು ನಾಳಿನ ಸಮಾರಂಭಕ್ಕೆ ಬರಲಿದ್ದು, ಹೋಗಿ ಬರುವವರಿಗೆ ಯಾವುದೇ ವಾಹನದ ವ್ಯವಸ್ಥೆ ಮಾಡಲ್ಲ ಎಂದು ಶ್ರಿ ಮಹೇಶ್ ಶೆಟ್ಟಿ ತಿಮರೋಡಿಯವರು ಈಗಾಗಲೇ ಹೇಳಿದ್ದಾರೆ. ಆದರೆ ನಾಳೆ ಸಮಾರಂಭಕ್ಕೆ ಬರುವವರಿಗೆ ನೀರಿನ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗುವುದು.